ಬೆಂಗಳೂರು | Karunaadu Times
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ನಲ್ಲಿ ವ್ಯಕ್ತವಾಗಿದ್ದ ಅಸಮಾಧಾನವನ್ನು ಶಮನಗೊಳಿಸಲು ಪಕ್ಷದ ಹೈಕಮಾಂಡ್ ಚುರುಕಿನ ಹೆಜ್ಜೆ ಇಟ್ಟಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರನ್ನು ಮನವೊಲಿಸುವ ಪ್ರಯತ್ನವಾಗಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಸುದೀರ್ಘ ಸಂಧಾನ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಸಚಿವರಾದ ಜಮೀರ್ ಅಹಮದ್ ಖಾನ್, ಹೆಚ್.ಸಿ. ಬಾಲಕೃಷ್ಣ, ಚಲುವರಾಯಸ್ವಾಮಿ, ಶಾಸಕ ರಂಗನಾಥ್ ಹಾಗೂ ಎಂಎಲ್ಸಿ ವಿನಯ್ ಕಾರ್ತಿಕ್ ಉಪಸ್ಥಿತರಿದ್ದರು. ಆದರೆ ಪ್ರಮುಖ ಚರ್ಚೆಯ ವೇಳೆ ಕೆಲವರನ್ನು ಹೊರಗಿಟ್ಟು, ಎಂ. ಕೃಷ್ಣಪ್ಪ, ಪ್ರಿಯಾಕೃಷ್ಣ, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಡಿ.ಕೆ. ಶಿವಕುಮಾರ್ ಅವರು ಬಾಗಿಲು ಮುಚ್ಚಿದ ಕೊಠಡಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮೂಲಗಳ ಪ್ರಕಾರ, ಸಚಿವ ಸ್ಥಾನ ಕೈತಪ್ಪಿರುವುದರಿಂದ ಶಾಸಕರಲ್ಲಿ ಮೂಡಿರುವ ಅಸಮಾಧಾನ, ಕಾರ್ಯಕರ್ತರ ಆಕ್ರೋಶ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.
"ಕಾಂಗ್ರೆಸ್ ಒಂದು ಕುಟುಂಬ" – ಸುರ್ಜೆವಾಲ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, "ಕಾಂಗ್ರೆಸ್ ಒಂದು ಕುಟುಂಬದಂತಿದೆ. ಎಂ. ಕೃಷ್ಣಪ್ಪ ನಮ್ಮ ಪಕ್ಷದ ಹಿರಿಯ ನಾಯಕರು, ಪ್ರಿಯಾಕೃಷ್ಣ ಭರವಸೆಯ ಯುವ ನಾಯಕರು. ಕುಟುಂಬದಲ್ಲಿ ನ್ಯಾಯಯುತ ಬೇಡಿಕೆಗಳು ಇರುವುದು ಸಹಜ. ಅವರ ಅಸಮಾಧಾನವನ್ನು ಆಲಿಸಿದ್ದೇವೆ. ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಸೇರಿ ಪರಿಹಾರ ಕಂಡುಕೊಳ್ಳಲಿದೆ. ಎಲ್ಲವೂ ಶೀಘ್ರದಲ್ಲೇ ಸಕಾರಾತ್ಮಕವಾಗಿ ಬಗೆಹರಿಯಲಿದೆ. ಈ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ತಲೆ ಹಾಕುವ ಅಗತ್ಯವಿಲ್ಲ" ಎಂದು ಹೇಳಿದರು.
"ಸಚಿವ ಸ್ಥಾನವೇ ಬೇಕು" – ಕೃಷ್ಣಪ್ಪ ಪಟ್ಟು
ಸಭೆಯ ಬಳಿಕ ಪ್ರತಿಕ್ರಿಯಿಸಿದ ಶಾಸಕ ಎಂ. ಕೃಷ್ಣಪ್ಪ, "ಸಚಿವ ಸ್ಥಾನ ನೀಡದಿರುವುದು ತಪ್ಪಾಗಿದೆ ಎಂದು ನಾಯಕರು ಒಪ್ಪಿಕೊಂಡಿದ್ದಾರೆ. ಅದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಹೇಗೆ ಸರಿಪಡಿಸುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ನಮ್ಮ ಪರವಾಗಿ ಉತ್ತಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಾರ್ಯಕರ್ತರಿಗೂ ಸ್ವಲ್ಪ ಸಮಯ ಕಾಯುವಂತೆ ಮನವಿ ಮಾಡುತ್ತೇನೆ" ಎಂದರು.
ಬೇರೆ ಯಾವುದೇ ಹುದ್ದೆ ನೀಡಿದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಅವರು ಸ್ಪಷ್ಟವಾಗಿ, "ಇಲ್ಲ. ನಮಗೆ ಸಚಿವ ಸ್ಥಾನವೇ ಬೇಕು. ಬೇರೆ ಯಾವುದೇ ಹುದ್ದೆಯನ್ನು ಒಪ್ಪುವುದಿಲ್ಲ" ಎಂದು ಖಡಕ್ ಸಂದೇಶ ರವಾನಿಸಿದರು.
ರಾಜಕೀಯ ಮಹತ್ವ
ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನದ ಧ್ವನಿಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಸ್ವತಃ ಮಧ್ಯಪ್ರವೇಶಿಸಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲಿ ಈ ಸಂಧಾನ ಪ್ರಯತ್ನ ಯಾವ ಫಲ ನೀಡಲಿದೆ ಎಂಬುದರ ಮೇಲೆ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.
Tags:#Congress #DKShivakumar #RandeepSurjewala #MKrishnappa #PriyaKrishna #CabinetExpansion #KarnatakaPolitics #CongressHighCommand #Bengaluru #PoliticalNews #BreakingNews #KarunaaduTimes #KannadaNews #wwwKarunaaduTimesCom
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update