ಚಂದ್ರನ ಮೇಲೆ ಮತ್ತೊಮ್ಮೆ ಮಾನವ ನಿರ್ಮಿತ ವಸ್ತುವೊಂದು ಅಪ್ಪಳಿಸಿರುವ ಘಟನೆ ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 2015ರಲ್ಲಿ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ಎಕ್ಸ್ ಉಡಾವಣೆ ಮಾಡಿದ್ದ ಫಾಲ್ಕನ್-9 ರಾಕೆಟ್ನ ಮೇಲ್ಭಾಗದ (Upper Stage) ಅವಶೇಷವು ಚಂದ್ರನ ಮೇಲ್ಮೈಗೆ ಅಪ್ಪಳಿಸಿರುವುದಾಗಿ ವರದಿಯಾಗಿದೆ.
ಸುಮಾರು ನಾಲ್ಕು ಟನ್ ತೂಕದ ಈ ರಾಕೆಟ್ ಅವಶೇಷವು ಗಂಟೆಗೆ ಸುಮಾರು 8,700 ಕಿಲೋಮೀಟರ್ ವೇಗದಲ್ಲಿ ಚಂದ್ರನ ಹಿಂಭಾಗದಲ್ಲಿರುವ ಐನ್ಸ್ಟೀನ್ ಕ್ರೇಟರ್ ಸಮೀಪ ಭಾರೀ ವೇಗದಲ್ಲಿ ಡಿಕ್ಕಿಯಾಗಿದೆ. ಪರಿಣಾಮ ಹೊಸ ಕುಳಿ (Crater) ನಿರ್ಮಾಣವಾಗಿದ್ದು, ಅಪಾರ ಪ್ರಮಾಣದ ಧೂಳಿನ ಕಣಗಳು ಬಾಹ್ಯಾಕಾಶಕ್ಕೆ ಚಿಮ್ಮಿವೆ.
ಈ ಘಟನೆಯಿಂದ ಉಂಟಾಗಿರುವ ಹೊಸ ಕುಳಿ ಹಾಗೂ ಚಂದ್ರನ ಮೇಲ್ಮೈಯಲ್ಲಿನ ಬದಲಾವಣೆಗಳ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಲೂನಾರ್ ರಿಕಾನೈಸನ್ಸ್ ಆರ್ಬಿಟರ್ (LRO) ಮೂಲಕ ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಿಂದ ಚಂದ್ರನ ಮಣ್ಣಿನ ರಚನೆ, ಮೇಲ್ಮೈ ಪದರಗಳು ಹಾಗೂ ಘರ್ಷಣೆಯ ಪರಿಣಾಮಗಳ ಕುರಿತು ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಇದು ಮೊದಲ ಘಟನೆ ಅಲ್ಲ...
ಚಂದ್ರನ ಮೇಲೆ ಮಾನವ ನಿರ್ಮಿತ ವಸ್ತುಗಳು ಅಪ್ಪಳಿಸಿರುವ ಘಟನೆಗಳು ಈ ಹಿಂದೆಯೂ ನಡೆದಿವೆ.
🔹 2009 – LCROSS ಮಿಷನ್: ನಾಸಾ ಚಂದ್ರನ ಧ್ರುವ ಪ್ರದೇಶದಲ್ಲಿ ನೀರಿನ ಮಂಜುಗಡ್ಡೆ ಪತ್ತೆಹಚ್ಚುವ ಉದ್ದೇಶದಿಂದ ತನ್ನ ರಾಕೆಟ್ ಭಾಗವನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿತ್ತು.
🔹 2008 – ಭಾರತದ ಚಂದ್ರಯಾನ-1: ಇಸ್ರೋ ತನ್ನ ಮೂನ್ ಇಂಪ್ಯಾಕ್ಟ್ ಪ್ರೋಬ್ ಅನ್ನು ಚಂದ್ರನ ದಕ್ಷಿಣ ಧ್ರುವದತ್ತ ಅಪ್ಪಳಿಸಿತ್ತು. ಬಳಿಕ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳಿರುವುದಕ್ಕೆ ಮಹತ್ವದ ಸಾಕ್ಷ್ಯ ದೊರೆತಿದ್ದು, ಭಾರತದ ಬಾಹ್ಯಾಕಾಶ ಸಾಧನೆಗೆ ಹೊಸ ಮೈಲಿಗಲ್ಲಾಯಿತು.
🔹 2019 – ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷದಿಂದ ಚಂದ್ರನ ಮೇಲ್ಮೈಗೆ ಹಾರ್ಡ್ ಲ್ಯಾಂಡಿಂಗ್ ಮಾಡಿತ್ತು.
ವಿಜ್ಞಾನಿಗಳ ಅಭಿಪ್ರಾಯ
ಬಾಹ್ಯಾಕಾಶ ತ್ಯಾಜ್ಯಗಳು ಚಂದ್ರನಿಗೆ ಅಪ್ಪಳಿಸುವುದು ಪರಿಸರದ ದೃಷ್ಟಿಯಿಂದ ಚರ್ಚೆಗೆ ಗ್ರಾಸವಾದರೂ, ಇಂತಹ ಘಟನೆಗಳು ಚಂದ್ರನ ಭೂವೈಜ್ಞಾನಿಕ ರಚನೆ, ಮಣ್ಣಿನ ಗುಣಲಕ್ಷಣಗಳು ಹಾಗೂ ಹೊಸ ಕುಳಿಗಳ ನಿರ್ಮಾಣದ ಕುರಿತು ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಲು ವಿಜ್ಞಾನಿಗಳಿಗೆ ಅವಕಾಶ ಕಲ್ಪಿಸುತ್ತವೆ.