ಟಿ.ನರಸೀಪುರ: ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಡಾ. ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಘೋಷಿಸಿದ ಮುಖಂಡರು, ಮಹದೇವಪ್ಪ ಅವರ ರಾಜಕೀಯ ಹಿರಿತನ ಹಾಗೂ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕಿತ್ತು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು ಮಾತನಾಡಿ, ಮಹದೇವಪ್ಪ ಅವರಿಗೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ, ಕಾಣದ ಕೈಗಳು ಅವರನ್ನು ಸಚಿವ ಸ್ಥಾನದಿಂದ ದೂರವಿಟ್ಟಿವೆ ಎಂದು ಆರೋಪಿಸಿದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಕ್ಷೇತ್ರದ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಮುಂದುವರಿಯಬೇಕೇ ಎಂಬುದನ್ನು ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಅವರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಕೋಟ್:“ಮಹದೇವಪ್ಪ ಅವರು 45 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜಕೀಯ ಹಿರಿತನವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ನೀಡುವುದನ್ನು ತಡೆಯಲಾಗಿದೆ. ಹಾಗಾಗಿ ಕ್ಷೇತ್ರದ ಎಲ್ಲ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ.”
— ಎಂ.ಡಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ತಿ. ನರಸೀಪುರ
Tags:#ತಿ_ನರಸೀಪುರ #ಎಚ್_ಸಿ_ಮಹದೇವಪ್ಪ #ಮಹದೇವಪ್ಪ #ಕಾಂಗ್ರೆಸ್ #ಕರ್ನಾಟಕ_ಕಾಂಗ್ರೆಸ್ #ಕರ್ನಾಟಕ_ರಾಜಕೀಯ #ಕಾಂಗ್ರೆಸ್_ಕಾರ್ಯಕರ್ತರು #ಸಾಮೂಹಿಕ_ರಾಜೀನಾಮೆ #ಸಚಿವ_ಸ್ಥಾನ #ಡಿಕೆ_ಶಿವಕುಮಾರ್ #ಸುನೀಲ್_ಬೋಸ್ #ಮೈಸೂರು_ರಾಜಕೀಯ #ಕಾಂಗ್ರೆಸ್_ರಾಜಕೀಯ #ಕರ್ನಾಟಕ_ಸುದ್ದಿ #KannadaNews #KarnatakaNews #Congress #HCMahadevappa #TNarasipura #ಕರ್ನಾಟಕಪಾಲಿಟಿಕ್ಸ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update