ಬೆಂಗಳೂರು: ಕೃಷಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಮಸ್ಯೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖುದ್ದಾಗಿ ಆಲಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದ ಸ್ಥಳದ ಸಮೀಪ ವಿದ್ಯಾರ್ಥಿಗಳು ಮನವಿ ಸಲ್ಲಿಸಲು ಬಂದಿದ್ದ ಸಂದರ್ಭದಲ್ಲಿ ಅವರನ್ನು ಗಮನಿಸಿದ ಡಿ.ಕೆ. ಶಿವಕುಮಾರ್, ವಿದ್ಯಾರ್ಥಿಗಳನ್ನು ತಮ್ಮ ಬಳಿಗೆ ಕರೆದು ಮಾತುಕತೆ ನಡೆಸಿದರು.
ವಿದ್ಯಾರ್ಥಿಗಳನ್ನು ಮರದ ನೆರಳಿಗೆ ಕರೆದುಕೊಂಡು ಹೋಗಿ ಅವರ ಸಮಸ್ಯೆಯನ್ನು ವಿವರವಾಗಿ ಆಲಿಸಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಯಾವ ಹಂತದಲ್ಲಿ ಉಂಟಾಗಿದೆ ಹಾಗೂ ಅದಕ್ಕೆ ಕಾರಣವೇನು ಎಂಬುದರ ಕುರಿತು ಮಾಹಿತಿ ಪಡೆದರು.
ವಿದ್ಯಾರ್ಥಿಗಳ ಅಹವಾಲು ಆಲಿಸಿದ ಬಳಿಕ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಡಿಕೆಶಿ, ನೇಮಕಾತಿ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ನಿಯಮಗಳ ತಿದ್ದುಪಡಿಯಿಂದಾಗಿ ಕೃಷಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗೊಂದಲ ಉಂಟಾಗಿದೆ ಎಂಬ ವಿದ್ಯಾರ್ಥಿಗಳ ಅಹವಾಲಿನ ಹಿನ್ನೆಲೆಯಲ್ಲಿ, ವಿಷಯವನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
900ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ
ಇತ್ತೀಚೆಗೆ ರಾಜ್ಯ ಸರ್ಕಾರ 900ಕ್ಕೂ ಹೆಚ್ಚು ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು.
ಈ ನೇಮಕಾತಿಯಲ್ಲಿ ಬಿ.ಇ./ಬಿ.ಟೆಕ್ನಲ್ಲಿ ಬಯೋಕೆಮಿಸ್ಟ್ರಿ ವಿಷಯವನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ನೇಮಕಾತಿ ಅರ್ಹತೆ ಕುರಿತ ಚರ್ಚೆಗೆ ಕಾರಣವಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದಿಂದ ಸ್ಪಷ್ಟ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಅಹವಾಲನ್ನು ನೇರವಾಗಿ ಆಲಿಸಿರುವ ಡಿಕೆಶಿ, ಕಾನೂನುಬದ್ಧವಾಗಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಭರವಸೆ ನೀಡಿರುವುದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
ನೇಮಕಾತಿ ಪ್ರಕ್ರಿಯೆಯ ಮುಂದಿನ ಬೆಳವಣಿಗೆ ಹಾಗೂ ಸರ್ಕಾರ ಕೈಗೊಳ್ಳುವ ನಿರ್ಧಾರದತ್ತ ಇದೀಗ ಅಭ್ಯರ್ಥಿಗಳ ಗಮನ ನೆಟ್ಟಿದೆ.
Tags:#DKShivakumar #GKVK #GKVKStudents #AgricultureOfficer #AgricultureRecruitment #KarnatakaJobs #GovernmentJobs #ಬೆಂಗಳೂರುಸುದ್ದಿ #ಕರ್ನಾಟಕಸುದ್ದಿ #ವಿದ್ಯಾರ್ಥಿಗಳಪ್ರತಿಭಟನೆ #ಕೃಷಿಅಧಿಕಾರಿನೇಮಕಾತಿ #KarnatakaNews #KarunaaduTimes
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update