ಬೆಂಗಳೂರು: ಇಲಾಖೆಯ ಕಾಮಗಾರಿಗಳ ಪ್ರಗತಿ ಕುರಿತು ಕನಿಷ್ಠ ಪ್ರಾಥಮಿಕ ಅಂಕಿ-ಅಂಶಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ನಿರೀಕ್ಷಿಸಿದ್ದ ಸಚಿವ ಕೃಷ್ಣ ಬೈರೇಗೌಡ, ಅಗತ್ಯ ಮಾಹಿತಿ ಇಲ್ಲದೆ ಬಂದ ಜಿಬಿಎ ಎಂಜಿನಿಯರ್ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ⚠️
ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆ ಕುರಿತು ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಂದ ಯೋಜನೆಯ ಪ್ರಗತಿ ಹಾಗೂ ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದರು.
ನಗರದ ಐದು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಬೀದಿ ದೀಪಗಳ ವಿದ್ಯುತ್ ಬಿಲ್ಗೆ ಎಷ್ಟು ಹಣ ಖರ್ಚಾಗುತ್ತಿದೆ? ಎಲ್ಇಡಿ ದೀಪಗಳ ಅಳವಡಿಕೆಯ ನಂತರ ವಿದ್ಯುತ್ ಬಳಕೆ ಹಾಗೂ ವೆಚ್ಚದಲ್ಲಿ ಎಷ್ಟು ವ್ಯತ್ಯಾಸವಾಗಿದೆ? ಎಂಬ ಕುರಿತು ಸಚಿವರು ಮಾಹಿತಿ ಬಯಸಿದರು. ಆದರೆ ಸಭೆಯಲ್ಲಿ ಅಧಿಕಾರಿಗಳ ಬಳಿ ಅಗತ್ಯ ಅಂಕಿ-ಅಂಶಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಮೂಲಭೂತ ಮಾಹಿತಿ ಇಲ್ಲದೆ ಸಭೆಗೆ ಬರುವುದೇಕೆ?” ಎಂಬ ರೀತಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸರ್ಕಾರಿ ವ್ಯವಸ್ಥೆಯಲ್ಲಿ ಯಾವುದೇ ಸಭೆಗೆ ಅಗತ್ಯ ಸಿದ್ಧತೆಯೊಂದಿಗೆ ಹಾಜರಾಗುವುದು ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.
3.02 ಲಕ್ಷ ಎಲ್ಇಡಿ ದೀಪಗಳ ಗುರಿ
ನಗರದಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಿಸಿ ಇಂಧನ ದಕ್ಷತೆಯ ಎಲ್ಇಡಿ ದೀಪಗಳನ್ನು ಅಳವಡಿಸುವ ಯೋಜನೆಗೆ 2025ರ ಮೇ 7 ಮತ್ತು 15ರಂದು ಕಾರ್ಯಾದೇಶ ನೀಡಲಾಗಿತ್ತು.
ಯೋಜನೆಯಡಿ ಒಟ್ಟು 3,02,919 ಎಲ್ಇಡಿ ದೀಪಗಳನ್ನು ಅಳವಡಿಸುವ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ ಇದುವರೆಗೆ 2,67,270 ದೀಪಗಳನ್ನು ಅಳವಡಿಸಲಾಗಿದೆ. ಇನ್ನೂ ಗಮನಾರ್ಹ ಪ್ರಮಾಣದ ಕಾಮಗಾರಿ ಬಾಕಿ ಉಳಿದಿರುವುದಕ್ಕೆ ಕಾರಣವೇನು ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅದೇ ರೀತಿ, ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಸ್ವಯಂಚಾಲಿತವಾಗಿ ಮೇಲ್ವಿಚಾರಣೆ ಮಾಡಲು 24,677 ಸಿಸಿಎಂಎಸ್ ಪ್ಯಾನಲ್ಗಳನ್ನು ಅಳವಡಿಸುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ 7,567 ಪ್ಯಾನಲ್ಗಳು ಮಾತ್ರ ಅಳವಡಿಕೆಯಾಗಿರುವುದರ ಬಗ್ಗೆಯೂ ಸಚಿವರು ವಿವರಣೆ ಕೇಳಿದರು.
ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಸುಮಾರು 61.01% ವಿದ್ಯುತ್ ಉಳಿತಾಯ ಸಾಧ್ಯವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಹೀಗಾಗಿ ಯೋಜನೆಯನ್ನು ವಿಳಂಬ ಮಾಡದೆ ಪೂರ್ಣಗೊಳಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಕಿ ಕಾಮಗಾರಿಗೆ ಎರಡು ತಿಂಗಳ ಗಡುವು
ಬಾಕಿ ಉಳಿದಿರುವ ಎಲ್ಇಡಿ ದೀಪಗಳು ಮತ್ತು ಸಿಸಿಎಂಎಸ್ ಪ್ಯಾನಲ್ಗಳ ಅಳವಡಿಕೆಯನ್ನು ಪೂರ್ಣಗೊಳಿಸಲು ಆಗಸ್ಟ್ 3, 2026ರಿಂದ ಹೆಚ್ಚುವರಿ ಎರಡು ತಿಂಗಳ ಕಾಲಾವಕಾಶ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.
ನಗರದಲ್ಲಿ ದೀಪಗಳೇ ಇಲ್ಲದಿರುವ ಅಗತ್ಯ ಪ್ರದೇಶಗಳನ್ನು ಗುರುತಿಸಿ ಹೊಸ ಬೀದಿ ದೀಪಗಳನ್ನು ಅಳವಡಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
48 ಗಂಟೆಯೊಳಗೆ ದೂರು ಪರಿಹರಿಸಲು ಸೂಚನೆ
‘ಸಹಾಯ’ ಪೋರ್ಟಲ್ಗೆ ಬರುತ್ತಿರುವ ದೂರುಗಳಲ್ಲಿ ಸುಮಾರು 34% ದೂರುಗಳು ಕಾರ್ಯನಿರ್ವಹಿಸದ ಬೀದಿ ದೀಪಗಳಿಗೆ ಸಂಬಂಧಿಸಿದವು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಇನ್ನು ಮುಂದೆ ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಬಳಿಕ 48 ಗಂಟೆಗಳೊಳಗೆ ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸಿದ್ದಾರೆ.
ನಿಗದಿತ ಅವಧಿಯಲ್ಲಿ ದೂರು ಪರಿಹರಿಸಲು ವಿಫಲವಾಗುವ ಗುತ್ತಿಗೆದಾರರ ವಿರುದ್ಧ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ದೀಪಗಳ ಸಂಖ್ಯೆ ಮತ್ತು ಸಮಸ್ಯೆ ಬಗೆಹರಿಸಲು ತೆಗೆದುಕೊಂಡ ವಿಳಂಬದ ದಿನಗಳ ಆಧಾರದ ಮೇಲೆ ದಂಡದ ಮೊತ್ತ ನಿಗದಿಪಡಿಸುವಂತೆ ಸೂಚಿಸಲಾಗಿದೆ.
ನಗರದ ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿಸುವ ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.