ಬೆಂಗಳೂರು, ಆ. 3: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಇಂದು 19 ಶಾಸಕರು ಸೇರ್ಪಡೆಯಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಲೋಕಭವನದಲ್ಲಿ ನಡೆದ ಸರಳ ಆದರೆ ಗೌರವಯುತ ಸಮಾರಂಭದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನೂತನ ಸಚಿವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಮೊದಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಕ್ರಮವಾಗಿ ಹೆಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ್ ರಾಯರೆಡ್ಡಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಣ್ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಬಿ. ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ವಿಜಯಾನಂದ ಕಾಶಪ್ಪನವರ್ ಹಾಗೂ ಜಮೀರ್ ಅಹ್ಮದ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಬಾರಿ ವಿಶೇಷವೆಂದರೆ, ಎಲ್ಲಾ 19 ಸಚಿವರು ಪಶ್ಚಿಮಾಭಿಮುಖವಾಗಿ ನಿಂತು ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮೊದಲ ಹಂತದ ಸಚಿವರು ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ರಾಜಕೀಯ ವಲಯ ಗಮನಿಸಿತ್ತು.
ಇದೇ ವೇಳೆ, ಸರ್ಕಾರ ಪ್ರಮುಖ ಸಂವಿಧಾನಾತ್ಮಕ ಹುದ್ದೆಗಳಿಗೂ ಹೆಸರುಗಳನ್ನು ಅಂತಿಮಗೊಳಿಸಿದೆ. ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ವಿಧಾನಸಭೆಯ ಸ್ಪೀಕರ್ ಹುದ್ದೆಗೆ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ವಿಧಾನ ಪರಿಷತ್ತಿನ ಸಭಾಪತಿಯಾಗಿ ಸಲೀಂ ಅಹಮದ್ ಹಾಗೂ ಉಪಸಭಾಪತಿಯಾಗಿ ಉಮಾಶ್ರೀ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಆದರೆ, ಈ ಮಹತ್ವದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.