ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅದರ ಪರಿಣಾಮವಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಗಮನಾರ್ಹವಾಗಿ ಹೆಚ್ಚಳವಾಗಿದೆ. ಸಕಲೇಶಪುರ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಆಲೂರು, ಬೇಲೂರು ಹಾಗೂ ಹಾಸನ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಧ್ಯಂತರ ಮಳೆಯಾಗುತ್ತಿದೆ.
ಇನ್ನೊಂದೆಡೆ, ನೆರೆಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ, ಹೇಮಾವತಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಕಳೆದ ಎರಡು ದಿನಗಳಲ್ಲಿ ಸುಮಾರು 2.042 ಟಿಎಂಸಿ ನೀರು ಸೇರ್ಪಡೆಯಾಗಿದೆ. ಪ್ರಸ್ತುತ ಜಲಾಶಯಕ್ಕೆ 12,859 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
37.103 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಸದ್ಯ 28.022 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,922.00 ಅಡಿ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 2,911.75 ಅಡಿ ತಲುಪಿದೆ.
ಜಲಾಶಯದ ನೀರಿನ ಮಟ್ಟವನ್ನು ಸಮತೋಲನದಲ್ಲಿಡುವ ಉದ್ದೇಶದಿಂದ ಹೇಮಾವತಿ ನದಿಗೆ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ನಿರಂತರ ಮಳೆಯ ಹಿನ್ನೆಲೆಯಲ್ಲಿ ನದಿ ತೀರದ ಜನರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದು, ಮುಂದಿನ ದಿನಗಳಲ್ಲೂ ಮಳೆಯ ಪ್ರಮಾಣವನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.