ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬಾಡಿಗೆಗೆ ವಾಸವಾಗಿದ್ದ ಸಾಫ್ಟ್ವೇರ್ ಎಂಜಿನಿಯರ್ನೊಬ್ಬ, ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ವೇಳೆ ರಹಸ್ಯವಾಗಿ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂಬ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದಾನೆ.
ಈ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬಂಧಿತನನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಆತ ಕಳೆದ ಐದು ವರ್ಷಗಳಿಂದ ಅದೇ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.
ಜುಲೈ 27ರಂದು ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯ ಬಳಿ ಮೊಬೈಲ್ ಹಿಡಿದು ಯಾರೋ ನಿಂತಿರುವ ಅನುಮಾನ ವ್ಯಕ್ತವಾಗಿತ್ತು. ಅನುಮಾನ ಬಲಗೊಂಡ ಬಳಿಕ ಅವರು ಪಕ್ಕದ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಘಟನಾ ಸ್ಥಳದಿಂದ ಮಂಜುನಾಥ್ ತ್ವರಿತವಾಗಿ ತೆರಳುತ್ತಿರುವ ದೃಶ್ಯಗಳು ದಾಖಲಾಗಿರುವುದು ಕಂಡುಬಂದಿದೆ.
ತಕ್ಷಣವೇ ಮನೆ ಮಾಲಕಿ ಬೇಗೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದಾಗ, ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇದೇ ರೀತಿಯ ಕೃತ್ಯವನ್ನು ಬೇರೆ ಯಾರ ಮೇಲಾದರೂ ಎಸಗಿದ್ದಾನೆಯೇ ಎಂಬುದರ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳು ಗಂಭೀರ ಅಪರಾಧವಾಗಿದ್ದು, ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Tags:#ಬೆಂಗಳೂರು #Bengaluru #Begur #CrimeNews #SoftwareEngineer #PrivacyViolation #HiddenCamera #WomenSafety #KarnatakaNews #BegurPolice #BreakingNews #KannadaNews #KarunaaduTimes #CrimeAlert #Techie