ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಹಿನ್ನೆಲೆ ಗಾಯಕಿ ಕೆ. ಜಮುನಾ ರಾಣಿ ಅವರು ಶುಕ್ರವಾರ (ಜುಲೈ 31) ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಹಲವು ದಶಕಗಳ ಕಾಲ ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದ ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕ ಅಮೂಲ್ಯ ಕಲಾವಿದೆಯನ್ನು ಕಳೆದುಕೊಂಡಿದೆ.
1938ರ ಮೇ 17ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಜಮುನಾ ರಾಣಿ ಅವರು ಬಾಲ್ಯದಿಂದಲೇ ಸಂಗೀತದತ್ತ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಕೇವಲ ಏಳು ವರ್ಷದ ವಯಸ್ಸಿನಲ್ಲೇ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಅವರು, ತಮ್ಮ ವಿಶಿಷ್ಟ ಕಂಠಸಿರಿಯ ಮೂಲಕ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಮುಖ ಗಾಯಕರ ಸಾಲಿನಲ್ಲಿ ಗುರುತಿಸಿಕೊಂಡರು.
ಸುಮಾರು ಏಳು ದಶಕಗಳ ಸಂಗೀತ ಪಯಣದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಸಿಂಹಳ ಸೇರಿದಂತೆ ವಿವಿಧ ಭಾಷೆಗಳಲ್ಲಿ 6,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿರುವುದು ಅವರ ಸಾಧನೆಯ ಮಹತ್ವವನ್ನು ಸಾರುತ್ತದೆ. ಮಧುರ ಕಂಠ, ಸ್ಪಷ್ಟ ಉಚ್ಚಾರಣೆ ಮತ್ತು ಭಾವಪೂರ್ಣ ಗಾಯನದಿಂದ ಅವರು ಹಲವು ತಲೆಮಾರಿನ ಸಂಗೀತಾಭಿಮಾನಿಗಳ ಮನ ಗೆದ್ದಿದ್ದರು.
ಕನ್ನಡ ಚಿತ್ರರಂಗಕ್ಕೂ ಜಮುನಾ ರಾಣಿ ಅವರ ಕೊಡುಗೆ ವಿಶೇಷವಾಗಿದೆ. ವರನಟ **** ಅಭಿನಯದ ಓಹಿಲೇಶ್ವರ ಚಿತ್ರದ "ಓ ಸುರ ಸುಂದರಿ..." ಹಾಡು ಸೇರಿದಂತೆ ಮನ ಮೆಚ್ಚಿದ ಮಡದಿ, ಜಗದೇಕವೀರ, ರತ್ನಮಂಜರಿ ಸೇರಿದಂತೆ ಹಲವು ಚಿತ್ರಗಳ ಜನಪ್ರಿಯ ಹಾಡುಗಳಿಗೆ ಅವರು ಧ್ವನಿಯಾಗಿದ್ದರು. ಅವರ ಗಾಯನ ಕನ್ನಡ ಸಂಗೀತಾಭಿಮಾನಿಗಳ ನೆನಪಿನಲ್ಲಿ ಶಾಶ್ವತ ಸ್ಥಾನ ಪಡೆದಿದೆ.
ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ತಮಿಳುನಾಡು ಸರ್ಕಾರವು ಅವರಿಗೆ 'ಕಲೈಮಾಮಣಿ', 'ಅಣ್ಣಾ ಪ್ರಶಸ್ತಿ' ಸೇರಿದಂತೆ ಹಲವು ಗೌರವಗಳನ್ನು ನೀಡಿತ್ತು. 2020ರಲ್ಲಿ ಅವರ ಜೀವಮಾನ ಸಾಧನೆಯನ್ನು ಸ್ಮರಿಸಿ 'ವಿಶೇಷ ಕಲೈಮಾಮಣಿ' ಪ್ರಶಸ್ತಿಯನ್ನೂ ನೀಡಿ ಸನ್ಮಾನಿಸಲಾಗಿತ್ತು.
ಜಮುನಾ ರಾಣಿ ಅವರು ಮದುವೆಯಾಗದೆ ತಮ್ಮ ಇಡೀ ಜೀವನವನ್ನೇ ಸಂಗೀತ ಸೇವೆಗೆ ಸಮರ್ಪಿಸಿದ್ದರು. ಅವರ ಮಧುರ ಕಂಠ ಇಂದು ಮೌನವಾಗಿದ್ದರೂ, ಅವರು ಹಾಡಿದ ಸಾವಿರಾರು ಗೀತೆಗಳು ಸಂಗೀತ ಲೋಕದಲ್ಲಿ ಸದಾ ಜೀವಂತವಾಗಿರಲಿವೆ.
ಅವರ ನಿಧನಕ್ಕೆ ಚಿತ್ರರಂಗ, ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Tags:#JamunaRani #Singer #KannadaCinema #SouthIndianCinema #PlaybackSinger #DrRajkumar #KannadaSongs #MusicLegend #Obituary #EntertainmentNews #KannadaNews #KarunaaduTimes