ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ರಾಜ್ಯಾದ್ಯಂತ ಲಿಖಿತ ಪರೀಕ್ಷೆ ನಡೆಯಲಿದೆ. ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸಲಿರುವ ಈ ಪರೀಕ್ಷೆಗೆ 4,54,532 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಕ್ರಮರಹಿತವಾಗಿ ನಡೆಸಲು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದು, ರಾಜ್ಯದ 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ ಸಮನ್ವಯದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದ 3,395 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳು ಸೇರಿ ಒಟ್ಟು 3,991 ಹುದ್ದೆಗಳು ಭರ್ತಿಯಾಗಲಿವೆ. ಉಳಿಕೆ ಮೂಲ ವೃಂದಕ್ಕೆ 3,77,861 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 76,684 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆಯ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 2ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.00ರವರೆಗೆ ಎಲ್ಲ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷೆ ನಡೆಯಲಿದೆ. ಬಳಿಕ ಸಂಜೆ 4.00ರಿಂದ 5.30ರವರೆಗೆ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ಆಯೋಜಿಸಲಾಗಿದೆ.
ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ತಡೆ ನೀಡುವ ಉದ್ದೇಶದಿಂದ ಈ ಬಾರಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಭ್ಯರ್ಥಿಗಳಿಗೆ ಮುಖ ಗುರುತಿಸುವ (Face Recognition) ತಂತ್ರಜ್ಞಾನದ ಮೂಲಕವೇ ಪ್ರವೇಶ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಮತ್ತು ಕೊಠಡಿಗಳಲ್ಲಿ ನಿರಂತರ ಸಿಸಿಟಿವಿ ಕಣ್ಗಾವಲು ಇರಲಿದ್ದು, ತಪಾಸಣೆ ಹಾಗೂ ಭದ್ರತಾ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ನಿರ್ವಹಿಸಲಿದೆ. ಒಟ್ಟಾರೆ ಪರೀಕ್ಷೆಯ ಮೇಲ್ವಿಚಾರಣೆಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು ವಹಿಸಲಿದ್ದಾರೆ.
ಪಾರದರ್ಶಕತೆ, ಕಟ್ಟುನಿಟ್ಟಿನ ಭದ್ರತೆ ಹಾಗೂ ತಂತ್ರಜ್ಞಾನದ ನೆರವಿನಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು KEA ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಅಭ್ಯರ್ಥಿಗಳು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
📢 KEA ಪರೀಕ್ಷೆಗಳು, ಉದ್ಯೋಗ ಮಾಹಿತಿ, ಶಿಕ್ಷಣ ಮತ್ತು ಕರ್ನಾಟಕದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ 👉 www.karunaadutimes.co