ಮಂಡ್ಯ: ಕಾವೇರಿ ನೀರು ಹಂಚಿಕೆ ವಿಚಾರ ಮತ್ತೊಮ್ಮೆ ರಾಜ್ಯ ರಾಜಕಾರಣ ಹಾಗೂ ಜನಆಂದೋಲನಕ್ಕೆ ಕಿಡಿ ಹಚ್ಚಿದೆ. ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಲಾದ ಆದೇಶದ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ರೈತರು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದರು. KRS ಡ್ಯಾಂ, ಮೈಸೂರು–ಬೆಂಗಳೂರು ಹಳೇ ಹೆದ್ದಾರಿ ಹಾಗೂ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದ್ದು, ಕೆಲವೆಡೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
KRS ಡ್ಯಾಂ ಗೇಟ್ ಎದುರು ಪ್ರತಿಭಟನಾಕಾರರು ತಮಿಳುನಾಡು, CWRC ಹಾಗೂ CWMA ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಹೋರಾಟಗಾರರು ಉರುಳು ಸೇವೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. "ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು" ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮೈಸೂರು–ಬೆಂಗಳೂರು ಹಳೇ ಹೆದ್ದಾರಿಯ ವಿಶ್ವೇಶ್ವರಯ್ಯ ಪ್ರತಿಮೆ ಸಮೀಪ ರಸ್ತೆ ತಡೆ ನಡೆಸಲಾಯಿತು. ರಸ್ತೆಯಲ್ಲೇ ಕುಳಿತು ರೈತರು ಪ್ರತಿಭಟನೆ ನಡೆಸಿದರೆ, ಅವರಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ರಸ್ತೆಯಿಂದ ತೆರವುಗೊಳಿಸಿ, ಕೆಲವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇನ್ನೊಂದೆಡೆ ಮಂಡ್ಯದ ಗುರುಶ್ರೀ ಥಿಯೇಟರ್ನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯಿಸಿರುವ ಜನನಾಯಗನ್ ಚಿತ್ರದ ಪ್ರದರ್ಶನದ ವಿರುದ್ಧವೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು, "ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವಾಗ ತಮಿಳುನಾಡು ಸಿಎಂ ಅಭಿನಯಿಸಿರುವ ಚಿತ್ರವನ್ನು ಪ್ರದರ್ಶಿಸಬಾರದು" ಎಂದು ಆಗ್ರಹಿಸಿ, ತಕ್ಷಣವೇ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮ ಕೈಗೊಂಡಿದೆ. ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಮಾತನಾಡಿ, KRS ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರತಾ ವ್ಯವಸ್ಥೆಯಲ್ಲಿ 2 ಎಸ್ಪಿ, 9 ಡಿವೈಎಸ್ಪಿ, 27 ಇನ್ಸ್ಪೆಕ್ಟರ್, 45 ಸಬ್ ಇನ್ಸ್ಪೆಕ್ಟರ್, 78 ಎಎಸ್ಐ ಸೇರಿದಂತೆ ಒಟ್ಟು 1,500ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Tags: #Kaveri #CauveryDispute #KRSDam #Mandya #Mysuru #FarmersProtest #KannadaOrganizations #CWRC #CWMA #TamilNadu #Karnataka #HighwayBlock #GurushreeTheatre #Jananayagan #PoliceSecurity #BreakingNews #KarunaaduTimes #MandyaNews #KarnatakaNews #ಕಾವೇರಿವಾಟರ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update