ಮಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದತ್ತು ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಹೋರಾಟಗಾರ ಪ್ರಕಾಶ್ ಅಂಚನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿಕ್ಷಣದಂತಹ ಮೂಲಭೂತ ಕ್ಷೇತ್ರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ವ್ಯಾಪಕ ಚರ್ಚೆ ಹಾಗೂ ತಜ್ಞರ ಸಲಹೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿರುವ ಪ್ರಕಾಶ್ ಅಂಚನ್, ಸಮಾಜಮುಖಿ ಸಂಘ-ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ದಾನಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು ಸ್ವಾಗತಾರ್ಹ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳ ಜವಾಬ್ದಾರಿ ನೀಡುವುದು ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನೇ ಬದಲಾಯಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಶಾಲೆಗಳ ಶಿಕ್ಷಕರನ್ನು ಸರ್ಕಾರಿ ಶಾಲೆಗಳಲ್ಲಿ ನಿಯೋಜಿಸುವ ಪರಿಸ್ಥಿತಿ ಬಂದರೆ, ಸೇವಾ ನಿಯಮಗಳು, ತರಬೇತಿ, ಆಡಳಿತಾತ್ಮಕ ನಿಯಂತ್ರಣ, ಬೋಧನಾ ವಿಧಾನ ಹಾಗೂ ಉತ್ತರದಾಯಿತ್ವ ಕುರಿತಂತೆ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಮೇಲೂ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹಲವು ಸಮಾಜಮುಖಿ ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದರೂ, ಸರ್ಕಾರದ ಕಠಿಣ ನಿಯಮಗಳು ಮತ್ತು ಆಡಳಿತಾತ್ಮಕ ಅಡೆತಡೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತಹ ಸಂಸ್ಥೆಗಳಿಗೆ ಅಗತ್ಯ ಸಡಿಲಿಕೆ ಮತ್ತು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಲಿವೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾವನೆ, ಸರ್ಕಾರ ತನ್ನ ಶಿಕ್ಷಣದ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳತ್ತ ವರ್ಗಾಯಿಸುತ್ತಿರುವ ಸಂದೇಶ ನೀಡುವಂತಿದೆ ಎಂದು ಪ್ರಕಾಶ್ ಅಂಚನ್ ಹೇಳಿದ್ದಾರೆ. ಶಿಕ್ಷಣದ ಹಕ್ಕು ಕಾಯ್ದೆ (RTE) ಅನ್ವಯ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದ್ದು, ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಬಲಪಡಿಸುವತ್ತ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Tags#GovernmentSchools #PrivateSchools #PrakashAnchan #Education #Karnataka #Mangaluru #SchoolAdoption #RTE #DKShivakumar #KannadaNews #ಕರುನಾಡುತಿಮೇಶ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update