ಚಿಕ್ಕಬಳ್ಳಾಪುರ: ಹೃದಯ ಕಲಕುವ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಜನಿಸಿದ ನವಜಾತ ಗಂಡು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು, "ಚಿಕಿತ್ಸೆಗೆ ಹಣ ತಂದುಕೊಡುತ್ತೇನೆ" ಎಂದು ಹೇಳಿ ತೆರಳಿದ ತಾಯಿ ಮರಳಿ ಬಾರದ ಹಿನ್ನೆಲೆಯಲ್ಲಿ ಮಗು ಇದೀಗ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ. ಈ ಘಟನೆ ಸ್ಥಳೀಯ ಆಡಳಿತ ಮತ್ತು ಮಕ್ಕಳ ರಕ್ಷಣಾ ಅಧಿಕಾರಿಗಳ ಗಮನ ಸೆಳೆದಿದ್ದು, ಯುವತಿಯ ಪತ್ತೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಕಳೆದ ಶುಕ್ರವಾರ (ಜುಲೈ 24) ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಯುವತಿಯೊಬ್ಬರಿಗೆ ಗಂಡು ಮಗು ಜನಿಸಿತ್ತು. ಜನನದ ವೇಳೆ ಮಗುವಿಗೆ ಕಡಿಮೆ ತೂಕ ಹಾಗೂ ಉಸಿರಾಟದ ತೊಂದರೆ ಕಂಡುಬಂದ ಕಾರಣ, ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ (NICU) ಸ್ಥಳಾಂತರಿಸಲಾಗಿತ್ತು. ತಾಯಿಯೊಂದಿಗೆ ಆರೈಕೆಗಾಗಿ ಕೇರ್ಟೇಕರ್ ನರ್ಸ್ ಕೂಡ ಬಂದಿದ್ದರು.
ಆಸ್ಪತ್ರೆಗೆ ಬಂದ ಬಳಿಕ ಮಗುವಿನ ಚಿಕಿತ್ಸೆಗೆ ಹಣ ತರಬೇಕಿದೆ ಎಂದು ಹೇಳಿ ಹೊರಟ ಮಹಿಳೆ ನಂತರ ಮರಳಿ ಬಂದಿಲ್ಲ ಎಂದು ತಿಳಿದುಬಂದಿದೆ. ವೈದ್ಯರು ಮಗುವಿನ ಪಾಲಕರ ಬಗ್ಗೆ ವಿಚಾರಿಸಿದಾಗ, ಕೇರ್ಟೇಕರ್ ನೀಡಿದ ಮಾಹಿತಿಯಿಂದ ಅನುಮಾನಗೊಂಡ ಅವರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ಮಕ್ಕಳ ರಕ್ಷಣಾ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವನಹಳ್ಳಿಯ ಆಸ್ಪತ್ರೆಯಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಲ್ಲಿಸಲಾಗಿದ್ದ ಆಧಾರ್ ದಾಖಲೆ ಆಧರಿಸಿ ಮಹಿಳೆಯ ವಿಳಾಸ ಹಾವೇರಿ ಜಿಲ್ಲೆಯದ್ದೆಂದು ತಿಳಿದುಬಂದಿದ್ದು, ಆಕೆಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಸದ್ಯ ನವಜಾತ ಶಿಶು ಆಸ್ಪತ್ರೆಯ ಎನ್ಐಸಿಯುನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಮಹಿಳೆ ಮಗುವನ್ನು ಏಕೆ ಬಿಟ್ಟು ಹೋಗಿದ್ದಾರೆ ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಲಿದೆ.