ನವದೆಹಲಿ, ಜು. 27: ಕರ್ನಾಟಕದ ಬಹುನಿರೀಕ್ಷಿತ ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದ್ದು, ಯೋಜನೆ ಜಾರಿಗೆ ತಮಿಳುನಾಡು, ಕೇರಳ ಅಥವಾ ಪುದುಚೇರಿಯ ಸಮ್ಮತಿ ಕಡ್ಡಾಯ ಎಂಬ ನಿಯಮ 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ತಿಳಿಸಿದೆ.
ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದ್ದು, ಕಾವೇರಿ ನದಿ ನೀರಿನ ಹಂಚಿಕೆ ಕುರಿತ 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವ ಮುನ್ನ ಕರ್ನಾಟಕವು ತಮಿಳುನಾಡು, ಕೇರಳ ಅಥವಾ ಪುದುಚೇರಿಯಿಂದ ಅನುಮತಿ ಪಡೆಯಬೇಕು ಎಂಬ ಷರತ್ತು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದ ಅನ್ಬುಮಣಿ ರಾಮದಾಸ್ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕವು ಕೆಳಹರಿವಿನ ರಾಜ್ಯಗಳ ಒಪ್ಪಿಗೆ ಪಡೆದಿದೆಯೇ? ಪಡೆದಿದ್ದರೆ ಅದರ ವಿವರವೇನು? ಕೇಂದ್ರ ಸರ್ಕಾರದ ಮುಂದೆ ಯೋಜನೆಯ ಪ್ರಸ್ತುತ ಸ್ಥಿತಿ ಏನು? ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಂತಹ ಯಾವುದೇ ಕಡ್ಡಾಯ ಒಪ್ಪಿಗೆಯ ಪ್ರಸ್ತಾಪವಿಲ್ಲ ಎಂದು ತಿಳಿಸಿದ್ದು, ಮೇಕೆದಾಟು ಯೋಜನೆ ಕುರಿತು ನಡೆಯುತ್ತಿರುವ ಚರ್ಚೆಗೆ ಹೊಸ ಆಯಾಮ ನೀಡಿದೆ.
ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್ ಉತ್ಪಾದನೆ ದೃಷ್ಟಿಯಿಂದ ಪ್ರಮುಖವಾಗಿದ್ದು, ತಮಿಳುನಾಡು ಇದಕ್ಕೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರದ ಈ ಸ್ಪಷ್ಟನೆ ಮುಂದಿನ ದಿನಗಳಲ್ಲಿ ಯೋಜನೆಗೆ ಸಂಬಂಧಿಸಿದ ರಾಜಕೀಯ ಹಾಗೂ ಕಾನೂನು ಬೆಳವಣಿಗೆಗಳಿಗೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.
Tags:#MekedatuProject #Karnataka #TamilNadu #Cauvery #BreakingNews #KannadaNews #IndiaNews #WaterDispute #RajyaSabha #KarunaaduTimes
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update