ನಾಗಮಂಗಲ, ಜು. 27: ದೇಶದ ಪ್ರತಿಯೊಬ್ಬ ನಾಗರಿಕ ಇಂದು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಗಡಿಯಲ್ಲಿ ಹಗಲು-ರಾತ್ರಿ ಎನ್ನದೆ ದೇಶದ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೈನಿಕರ ತ್ಯಾಗ ಮತ್ತು ಸಮರ್ಪಣೆಯೇ ಪ್ರಮುಖ ಕಾರಣ ಎಂದು ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಚೆಲುವರಾಜು ಹೇಳಿದರು.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಾಗಮಂಗಲದ ಸೌಮ್ಯ ಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧವು ಭಾರತದ ಶೌರ್ಯ, ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ದುರ್ಗಮ ಪರ್ವತ ಪ್ರದೇಶಗಳಲ್ಲಿ ಶತ್ರುಗಳನ್ನು ಸಮರ್ಥವಾಗಿ ಎದುರಿಸಿ, ಭಾರತದ ಭೂಭಾಗವನ್ನು ಮರಳಿ ಪಡೆದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಿದ ಸೈನಿಕರ ಸಾಹಸ ದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಅವರು ಹೇಳಿದರು.
ಮಳೆ, ಬಿಸಿಲು, ಚಳಿ ಎನ್ನದೆ ಗಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಯೋಧರ ಸೇವೆ ಅನನ್ಯವಾಗಿದೆ. ಅವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬ ಭಾರತೀಯ ಸದಾ ಸ್ಮರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗಮಂಗಲದ ಸಹಾಯಕ ಸಾರಿಗೆ ಅಧಿಕಾರಿ ಹೊನ್ನೇಗೌಡ ಮಾತನಾಡಿ, ದೇಶದ ಗಡಿಯನ್ನು ಕಾಪಾಡುವುದಷ್ಟೇ ಅಲ್ಲದೆ ಪ್ರಕೃತಿ ವಿಕೋಪ, ತುರ್ತು ಪರಿಸ್ಥಿತಿ ಹಾಗೂ ಆಂತರಿಕ ಭದ್ರತಾ ಕಾರ್ಯಾಚರಣೆಗಳಲ್ಲಿಯೂ ಭಾರತೀಯ ಸೈನಿಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಸೇವೆ ರಾಷ್ಟ್ರಕ್ಕೆ ಅಪಾರ ಕೊಡುಗೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ಸೌಮ್ಯ ಕೇಶವಸ್ವಾಮಿ ದೇವಸ್ಥಾನದಿಂದ ಟಿಬಿ ಗಣಪತಿ ದೇವಸ್ಥಾನವರೆಗೆ ದೇಶಭಕ್ತಿ ಘೋಷಣೆಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಗೌಡ, ಪುರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ, ಮಿಷನ್ ಮೋದಿ ತಂಡದ ಅಧ್ಯಕ್ಷ ದೇಶಪ್ರೇಮಿ ಶ್ರೀನಿವಾಸ್, ನಿವೃತ್ತ ನೌಕರರ ಸಂಘದ ಶಿವಣ್ಣಗೌಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಕದಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಎನ್ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Tags: #KargilVijayDiwas #KargilVijayotsava #Nagamangala #MandyaNews #IndianArmy #IndianSoldiers #DYSPCheluvaraju #ExServicemen #Patriotism #KarnatakaNews #BreakingNews #KarunaaduTimes #KannadaNews #DefenceNews #NationalNews #ArmyPride #NCC #Soldiers #KargilWar #NagamangalaNews #Mandya #TodayNews #LatestKannadaNews #wwwಕರುನಾಡುತಿಮೆಸ್ಕಾಂ
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update