ಯಾದಗಿರಿ, ಜು. 24:ಸುಮಾರು 12 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಬಹುಚರ್ಚಿತ ದಲಿತ ಮುಖಂಡರ ಕೊಲೆ ಪ್ರಕರಣಕ್ಕೆ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ 17 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣವು 2014ರ ಜನವರಿಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ನಡೆದ ಚೌಡೇಶ್ವರಿ ದೇವಿ ಜಾತ್ರೆಯ ವೇಳೆ ಸಂಭವಿಸಿತ್ತು. ಬ್ಯಾನರ್ ಹರಿದ ವಿಚಾರವಾಗಿ ಆರಂಭವಾದ ವಿವಾದ ಜಾತಿ ಸಂಘರ್ಷಕ್ಕೆ ತಿರುಗಿ, ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಳಪತಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕೊಡಲಿ, ಬಡಿಗೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ ಪರಿಣಾಮ ಅವರು ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಶಹಾಪುರ ಪೊಲೀಸರು ಒಟ್ಟು 32 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ, ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳ ಬಳಿಕ ನ್ಯಾಯಾಲಯ ಇದೀಗ ಅಂತಿಮ ತೀರ್ಪು ಪ್ರಕಟಿಸಿದೆ.
ನ್ಯಾಯಾಲಯವು 17 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೊತೆಗೆ, ಪ್ರಕರಣದಲ್ಲಿ ವಿಧಿಸಲಾದ ₹4.25 ಲಕ್ಷ ದಂಡದ ಮೊತ್ತವನ್ನು ಮೃತ ದೇವೇಂದ್ರಪ್ಪ ದಳಪತಿ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಈ ತೀರ್ಪು ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವಂತಿದ್ದು, ಸುದೀರ್ಘ ಅವಧಿಯ ಬಳಿಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ
Tags:#Yadagiri #Shahapur #KarnatakaCrime #CourtVerdict #LifeImprisonment #DalitLeader #Justice #KarnatakaNews #BreakingNews #CrimeNews #LegalNews #KarunaaduTimes
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update