ಗಂಗಾಪೂಜೆಯಿಂದ ಆರಂಭಗೊಂಡ ಧಾರ್ಮಿಕ ಸಂಭ್ರಮ – ವೀರಗಾಸೆ, ಅರ್ಧನಾರೀಶ್ವರಿ ನೃತ್ಯ ಜನಮನ ಸೆಳೆಯಿತು
ಕೃಷ್ಣರಾಜಪೇಟೆ, ಮಂಡ್ಯ: ಧಾರ್ಮಿಕ ನಂಬಿಕೆ, ಸಂಪ್ರದಾಯ ಹಾಗೂ ಜಾನಪದ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿದ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಹಾಗೂ ಅದ್ಧೂರಿಯಾಗಿ ನೆರವೇರಿತು.
ನೇಕಾರ ತೊಗಟವೀರ ಸಮಾಜದ ಶ್ರೀರಾಚಿ ನಂಜುಂಡಯ್ಯ ಅವರ ವಂಶಸ್ಥರ ಆಶ್ರಯದಲ್ಲಿ ಸತತ 26ನೇ ವರ್ಷದ ಈ ಮಹೋತ್ಸವ ಆಯೋಜನೆಯಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ, ಭಕ್ತರ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯಗಳ ನಡುವೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಇತಿಹಾಸ ಪ್ರಸಿದ್ಧ ಶ್ರೀ ದೇವಿರಮ್ಮಣ್ಣಿ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಗಂಗಾಪೂಜೆ ನೆರವೇರಿಸಿ, ಲೋಕಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಚಾಮುಂಡೇಶ್ವರಿ ಅಮ್ಮನವರ ಕರಗವನ್ನು ಬಾಲಕಿಯ ತಲೆಯ ಮೇಲೆ ಪ್ರತಿಷ್ಠಾಪಿಸಿ, ಭಕ್ತರು ನಡೆಮುಡಿ ಹಾಸುವ ಮೂಲಕ ಗೌರವಪೂರ್ವಕವಾಗಿ ಶಿವ-ಪಾರ್ವತಿಯರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಭದ್ರ ನೃತ್ಯ ಕಲಾವಿದ ರುದ್ರೇಶ್ ಪ್ರಸಾದ್ ಹಾಗೂ ತಂಡದವರಿಂದ ನಡೆದ ವೀರಗಾಸೆ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ಕರಗ ಹೊತ್ತಿದ್ದ ಸ್ವಾಗತ್ ಚಂದ್ರು ಅವರ ಅರ್ಧನಾರೀಶ್ವರಿ ನೃತ್ಯ ಭಕ್ತರು ಹಾಗೂ ಸಾರ್ವಜನಿಕರಿಂದ ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಮಹೋತ್ಸವದ ಅಂಗವಾಗಿ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಸಾಗಿದರೆ, ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಪುಳಿಯೋಗರೆ ಹಾಗೂ ಸಿಹಿ ಪೊಂಗಲ್ ಅನ್ನಪ್ರಸಾದ ವಿತರಿಸಲಾಯಿತು.
ಪೂಜಾ ಹಾಗೂ ಧಾರ್ಮಿಕ ವಿಧಿವಿಧಾನಗಳ ನೇತೃತ್ವವನ್ನು ಉದ್ಯಮಿ ಕೆ.ಸಿ. ಚಂದ್ರಶೇಖರ್ ಮತ್ತು ಸುಮತಿ ಚಂದ್ರು ದಂಪತಿ ವಹಿಸಿದ್ದರು.
ಈ ಮಹೋತ್ಸವವು ಕೃಷ್ಣರಾಜಪೇಟೆಯ ಧಾರ್ಮಿಕ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಸಮಾಜದ ಒಗ್ಗಟ್ಟಿನ ಪ್ರತೀಕವಾಗಿ ಮತ್ತೊಮ್ಮೆ ಜನಮನದಲ್ಲಿ ಅಚ್ಚಳಿಯದ ನೆನಪನ್ನು ಮೂಡಿಸಿತು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.
Tags:#Krishnarajapete #KRPete #Mandya #ShivaParvathi #PallakkiUtsava #Chamundeshwari #Karaga #KaragaMahotsava #Devotional #TempleFestival #KarnatakaCulture #Janapada #Veeragase #Ardhanareeshwara #MandyaNews #KarnatakaNews #KannadaNews #KarunaaduTimes #KRPeteNews #ಫೆಸ್ಟಿವನ್ಯೂಸ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update