ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ ಭಕ್ತಿಯ ಸಾಗರವಾಗಿ ಮಾರ್ಪಟ್ಟಿದೆ. ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಇಂದು ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ದೇವಿಯ ದಿವ್ಯ ರೂಪವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ.
ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿಯ ನಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ವಿವಿಧ ಬಗೆಯ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಲ್ಪಟ್ಟ ದೇವಸ್ಥಾನ ಭಕ್ತರ ಮನಸೆಳೆಯುವಂತಿತ್ತು.
ಆಷಾಢ ಶುಕ್ರವಾರದ ಹಿನ್ನೆಲೆ ದೇವಾಲಯದಲ್ಲಿ ಭದ್ರತೆ ಹಾಗೂ ದರ್ಶನ ವ್ಯವಸ್ಥೆಯನ್ನು ವಿಶೇಷವಾಗಿ ರೂಪಿಸಲಾಗಿದೆ. ₹2,000 ಮೌಲ್ಯದ ವಿಶೇಷ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ನೇರ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆ 5:30ರಿಂದ 10:00 ಗಂಟೆಯವರೆಗೆ ವಿವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕಳೆದ ಮೊದಲ ಆಷಾಢ ಶುಕ್ರವಾರ ತಾಯಿ ಚಾಮುಂಡೇಶ್ವರಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿದ್ದರೆ, ಎರಡನೇ ಶುಕ್ರವಾರದಂದು ಲಕ್ಷ್ಮೀ ಅಲಂಕಾರದಲ್ಲಿ ದೇವಿಯ ದಿವ್ಯ ಸೌಂದರ್ಯ ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿತು. ದಿನವಿಡೀ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದ್ದು, ದೇವಸ್ಥಾನ ಆಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ