ಚನ್ನಪಟ್ಟಣ:ಬೆಂಗಳೂರು ನಗರ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು ಲಕ್ಷಾಂತರ ಜನರಿಗೆ ಉದ್ಯೋಗ, ಆಶ್ರಯ ಮತ್ತು ಬದುಕಿನ ಭದ್ರತೆಯನ್ನು ನೀಡುತ್ತಿರುವ ಮಹಾನಗರವಾಗಿ ಬೆಳೆದಿದೆ. ಇದರ ಹಿಂದಿರುವ ದೂರದೃಷ್ಟಿಯ ನಾಯಕತ್ವ ನಾಡಪ್ರಭು ಕೆಂಪೇಗೌಡರದ್ದು ಎಂದು ಆದಿಚುಂಚನಗಿರಿ ಅಂಧರ ಶಾಖಾ ಮಠದ ಪೀಠಾಧ್ಯಕ್ಷರಾದ ಡಾ. ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇವೂರಿನ ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕೆಂಪೇಗೌಡರ ಐತಿಹಾಸಿಕ ಸಾಧನೆಗಳು ಹಲವು ವರ್ಷಗಳ ಕಾಲ ಸಮಾಜಕ್ಕೆ ಸಮರ್ಪಕವಾಗಿ ತಲುಪಲಿಲ್ಲ. ನಂತರ ಸರ್ಕಾರ ಗ್ರಾಮ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಕೆಂಪೇಗೌಡ ಜಯಂತಿಯನ್ನು ಆಚರಿಸುವ ನಿರ್ಧಾರ ಕೈಗೊಂಡ ಬಳಿಕ ಅವರ ಕೊಡುಗೆಗಳು ಜನರಿಗೆ ಹೆಚ್ಚು ಪರಿಚಿತವಾದವು ಎಂದು ಹೇಳಿದರು.
ಬೆಂಗಳೂರು ನಗರವನ್ನು ಎಲ್ಲ ಸಮುದಾಯದ ಜನರು ನೆಲೆಸಿ ಬದುಕು ಕಟ್ಟಿಕೊಳ್ಳುವಂತೆ ದೂರದೃಷ್ಟಿಯಿಂದ ರೂಪಿಸಿದ ಕೆಂಪೇಗೌಡರು, ವಿವಿಧ ವೃತ್ತಿಗಳಿಗೆ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿ ಸಮಗ್ರ ನಗರಾಭಿವೃದ್ಧಿಯ ಮಾದರಿಯನ್ನು ಕಟ್ಟಿಕೊಟ್ಟಿದ್ದರು. ಅವರ ಆಡಳಿತ ದೃಷ್ಟಿಕೋನ ಇಂದಿಗೂ ನಗರ ಯೋಜನೆಗೆ ಪ್ರೇರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೆಂಪೇಗೌಡರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ದಾರಿದೀಪವಾಗಿದ್ದ ನಾಯಕನಾಗಿ ಸ್ಮರಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಶಿಕ್ಷಣ ಪಡೆಯಲು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಮಠಗಳ ಮೂಲಕ ಅಗತ್ಯ ನೆರವು ನೀಡಲು ಸಿದ್ಧವಿದ್ದೇವೆ ಎಂದೂ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ, ಸಾಧಕರಿಗೆ ಅವರು ಜೀವಂತವಾಗಿರುವಾಗಲೇ ಗೌರವ ಸಲ್ಲಿಸುವ ಸಂಸ್ಕೃತಿ ಬೆಳೆಯಬೇಕು ಎಂದರು. ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜಸೇವಕ ಪಂಚಮಿ ಪ್ರಸನ್ನ ಪಿ.ಗೌಡ ಅವರು, ಗುರಿ ಮತ್ತು ಗುರುಗಳ ಮಾರ್ಗದರ್ಶನ ಇದ್ದರೆ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳಿದರು. ಇದೇ ವೇಳೆ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯೊಂದರಿಂದ ₹10 ಲಕ್ಷ ಸಿಎಸ್ಆರ್ ಅನುದಾನ ಮಂಜೂರಾಗಿದ್ದು, ಅದನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್. ದಿನೇಶ್ ಶಿಕ್ಷಣ ಸಂಸ್ಥೆಯ ಬೆಳವಣಿಗೆಯನ್ನು ಶ್ಲಾಘಿಸಿ, ಸೇವಾ ಮನೋಭಾವದ ಆಡಳಿತದಿಂದ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸೂಟ್ ವಿತರಿಸಿದ ಸಮಾಜಸೇವಕ ತಿಮ್ಮಸಂದ್ರ ನರ್ಸರಿ ಲೋಕೇಶ್, ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಿ.ಸಿ. ಯೋಗೇಶ್ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಗಣ್ಯರು, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Tags: #Kempegowda #KempegowdaJayanti #Channapatna #Bevoor #Ramanagara #Bengaluru #NadaprabhuKempegowda #Karnataka #KannadaNews #KarunaaduTimes #Education #Students #CSR #Okkaliga #KarnatakaNews #BreakingNews #ViralNews #BengaluruHistory #KempegowdaLegacy #ರಾಮನಗರನ್ಯೂಸ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update