ಕೆ.ಆರ್.ಪೇಟೆ, ಮಂಡ್ಯ:ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಹಾಳು ಮಾಡುವ ಡ್ರಗ್ಸ್ ಹಾಗೂ ಇತರೆ ಮಾದಕ ವಸ್ತುಗಳ ವಿರುದ್ಧ ಯುವಜನತೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಚೆಲುವರಾಜು ಕರೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡ್ರಗ್ಸ್ ಮತ್ತು ಇತರೆ ಮಾದಕ ವಸ್ತುಗಳು ಆರಂಭದಲ್ಲಿ ಆಕರ್ಷಕವಾಗಿ ಕಂಡರೂ, ಅವು ವ್ಯಕ್ತಿಯ ಆರೋಗ್ಯ, ಶಿಕ್ಷಣ, ವ್ಯಕ್ತಿತ್ವ ಹಾಗೂ ಕುಟುಂಬದ ನೆಮ್ಮದಿಯನ್ನು ಹಾಳುಮಾಡುವ ಅಪಾಯಕಾರಿ ಚಟಗಳಾಗಿವೆ ಎಂದು ಅವರು ಎಚ್ಚರಿಸಿದರು. ಇಂತಹ ಚಟಗಳಿಗೆ ಬಲಿಯಾದರೆ ವಿದ್ಯಾರ್ಥಿಗಳ ಕನಸುಗಳು ನಶಿಸಿ, ಸಮಾಜಕ್ಕೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಡ್ರಗ್ಸ್ ಮಾರಾಟ ಮಾಡುವ ಸಮಾಜ ವಿರೋಧಿಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಗೃತರಾಗಿರಬೇಕು. ಎಲ್ಲಿಯಾದರೂ ಮಾದಕ ವಸ್ತುಗಳ ಮಾರಾಟ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸಮಾಜವನ್ನು ಡ್ರಗ್ಸ್ ಮುಕ್ತಗೊಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೊರವಾಲೆ ನಾಗರಾಜು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ದುಶ್ಚಟಗಳಿಂದ ದೂರವಿದ್ದು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್, ಹಿರಿಯ ಪ್ರಾಧ್ಯಾಪಕ ಮಹಾಲಿಂಗೇಗೌಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.
Tags: #KRPet #Krishnarajapete #Mandya #GovernmentPolytechnic #DrugFreeIndia #SayNoToDrugs #AntiDrugCampaign #DYSPCheluvaraju #KarnatakaPolice #StudentAwareness #YouthSafety #Education #PoliceAwareness #MandyaNews #KarnatakaNews #BreakingNews #KarunaaduTimes #KannadaNews #ViralNews #DrugAwareness
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update