ಗ್ಲಾಸ್ಗೋ (ಸ್ಕಾಟ್ಲ್ಯಾಂಡ್): ಕಾಮನ್ವೆಲ್ತ್ ಗೇಮ್ಸ್–2026ರ ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತಕ್ಕೆ ಸಂತಸದ ಸುದ್ದಿ ದೊರೆತಿದೆ. ಭಾರತದ ಸ್ಟಾರ್ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.
ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಡ್ರಾ ಪ್ರಕ್ರಿಯೆಯಲ್ಲಿ ಲವ್ಲಿನಾ ಅವರಿಗೆ 'ಬೈ' (Bye) ದೊರೆತಿದೆ. ಇದರ ಪರಿಣಾಮ ಅವರು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಬಾಕ್ಸಿಂಗ್ ಸ್ಪರ್ಧೆಯ ನಿಯಮಾನುಸಾರ ಸೆಮಿಫೈನಲ್ ತಲುಪಿದ ಇಬ್ಬರು ಸೋತ ಸ್ಪರ್ಧಿಗಳಿಗೂ ಕಂಚಿನ ಪದಕ ನೀಡಲಾಗುವುದರಿಂದ ಭಾರತಕ್ಕೆ ಕನಿಷ್ಠ ಒಂದು ಪದಕ ಖಚಿತವಾಗಿದೆ.
ಅಸ್ಸಾಂ ಮೂಲದ ಲವ್ಲಿನಾ ಬೊರ್ಗೊಹೈನ್ ಈಗ ಚಿನ್ನದ ಪದಕದತ್ತ ತಮ್ಮ ಅಭಿಯಾನ ಮುಂದುವರಿಸಲಿದ್ದು, ಸೆಮಿಫೈನಲ್ನಲ್ಲಿ ಗೆಲುವು ಸಾಧಿಸಿದರೆ ಫೈನಲ್ ಪ್ರವೇಶಿಸಿ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಸೆಣಸಲಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಬಾಕ್ಸರ್ಗಳಿಂದ ಮತ್ತಷ್ಟು ಪದಕಗಳ ನಿರೀಕ್ಷೆ ಇದ್ದು, ಲವ್ಲಿನಾ ಅವರ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.