ಮಂಡ್ಯ, ಜು. 23 (ಕರುನಾಡು ಟೈಮ್ಸ್):ವಿದ್ಯಾರ್ಥಿಗಳು ಅಲ್ಪತೃಪ್ತಿಗೆ ಸೀಮಿತರಾಗದೆ ಉನ್ನತ ಗುರಿಗಳನ್ನು ನಿಗದಿಪಡಿಸಿಕೊಂಡು ಅವುಗಳನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಮಂಡ್ಯ ಜಿಲ್ಲಾ ಉಪ ನಿರ್ದೇಶಕ ಪ್ರಸನ್ನಕುಮಾರ್ ಕರೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಶ್ರೀ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಾಗತ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಿಯುಸಿ ಹಂತವು ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಇದೇ ಅವಧಿಯಲ್ಲಿ ರೂಪುಗೊಳ್ಳುವ ಅಭ್ಯಾಸಗಳು ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಹೇಳಿದರು. ಓದುವ ಸಮಯವನ್ನು ವ್ಯರ್ಥಗೊಳಿಸದೆ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ಹಾಗೂ ಆನ್ಲೈನ್ ಆಟಗಳ ವ್ಯಾಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಶಿಸ್ತು, ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಮೂಲಕ ಗುರಿ ತಲುಪಬಹುದು. ತರಗತಿಯಲ್ಲಿ ಕಲಿತ ಪಾಠಗಳನ್ನು ಅಂದೇ ಪುನರಾವರ್ತನೆ ಮಾಡಿ, ಓದಿದ ವಿಷಯವನ್ನು ಬರೆಯುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು. ವಿದ್ಯೆ ಎಂಬುದು ಯಾರೂ ಕಸಿದುಕೊಳ್ಳಲಾಗದ ಅಮೂಲ್ಯ ಆಸ್ತಿಯಾಗಿದ್ದು, ಅದೇ ಜೀವನದ ನಿಜವಾದ ಸಂಪತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಉದ್ಯಮಿ ರಾಮಚಂದ್ರ ಮಾತನಾಡಿ, 25 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕ್ಷಣಗಳನ್ನು ಸ್ಮರಿಸಿದರು.
"ಗುರುಗಳ ಮಾರ್ಗದರ್ಶನ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನನ್ನ ಯಶಸ್ಸಿನ ಮೂಲ. ಶಿಕ್ಷಕರು ಬೈದು ಬುದ್ಧಿವಾದ ಹೇಳುವುದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದಲೇ. ಜೀವನದಲ್ಲಿ ಸಮಸ್ಯೆಗಳು ಬಂದಾಗ ಕುಗ್ಗದೆ ಅವುಗಳನ್ನು ಎದುರಿಸಿ ಮುನ್ನಡೆಯಬೇಕು. ವಿದ್ಯಾರ್ಥಿ ಜೀವನದಲ್ಲಿ ತಲೆಬಗ್ಗಿಸಿ ಪುಸ್ತಕ ಓದಿದವರು ಮುಂದಿನ ದಿನಗಳಲ್ಲಿ ತಲೆ ಎತ್ತಿ ಗೌರವಯುತ ಜೀವನ ನಡೆಸುತ್ತಾರೆ," ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ್, ನಿವೃತ್ತ ಸಹ ಪ್ರಾಧ್ಯಾಪಕ ಪಿ.ಕೆ. ಜವರೇಗೌಡ, ಸಹಶಿಕ್ಷಕ ಎ.ಆರ್. ನಾಗೇಶ್, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಬಂಡಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಬಿ. ಮಲ್ಲಪ್ಪ, ಸಮಾಜಸೇವಕ ಬಸವೇಗೌಡ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರೇಮಕುಮಾರ್ ಹಾಗೂ ಜಿ.ಬಿ. ನಾಗರಾಜು ಸೇರಿದಂತೆ ಹಲವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಂಡಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಯ್ಯ ಉಂಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಲೇಖನಿಯನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದುದು ವಿಶೇಷವಾಗಿತ್ತು.
— ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ
Tags: #KRPete #Mandya #SriKrishnarajaPUCollege #PUCStudents #StudentWelcome #Education #PrasannaKumar #MandyaNews #CollegeEvents #KarnatakaEducation #MotivationalSpeech #KarunaaduTimes #KRPeteNews #MandyaDistrict #SportsAndCultural #KannadaNews #BreakingMandya #EducationNews #Students #CareerGoals
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update