ಮಂಡ್ಯ:ಹುಟ್ಟುಹಬ್ಬವನ್ನು ಸಂಭ್ರಮಿಸಬೇಕಿದ್ದ ದಿನವೇ ಯುವಕನೊಬ್ಬ ಹತ್ಯೆಗೆ ಒಳಗಾಗಿದ್ದ ಪ್ರಕರಣವನ್ನು ಮಂಡ್ಯ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರಂಭದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ, ಮೃತನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೇ ಕೊಲೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ನಿವಾಸಿ ಹಾಗೂ ಕಾರ್ಪೆಂಟರ್ ರಾಕೇಶ್ ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಅಂಬರೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ರಾಕೇಶ್ ಮತ್ತು ಅಂಬರೀಶ್ ಇಬ್ಬರೂ ಕಾರ್ಪೆಂಟರ್ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿ ಊರಿಗೆ ಮರಳುವ ವೇಳೆ ಮಳೆಯ ಕಾರಣದಿಂದ ಕೆ.ಆರ್.ಎಸ್ ಬಸ್ ನಿಲ್ದಾಣದಲ್ಲಿ ತಂಗಿದ್ದರು.
ಈ ವೇಳೆ ರಾಕೇಶ್ ತನ್ನ ಪರಿಚಯದ ವ್ಯಕ್ತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದನು. ಊರಿಗೆ ಹೊರಡೋಣ ಎಂದು ಅಂಬರೀಶ್ ಒತ್ತಾಯಿಸಿದ್ದರೂ ರಾಕೇಶ್ ಒಪ್ಪಿರಲಿಲ್ಲ. ಇದೇ ವೇಳೆ ಊಟದ ವೆಚ್ಚದ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪೋದ್ರಿಕ್ತನಾದ ಅಂಬರೀಶ್ ಅಲ್ಲಿದ್ದ ಕಲ್ಲಿನಿಂದ ರಾಕೇಶ್ ತಲೆಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ತನಿಖೆ ದಿಕ್ಕು ತಪ್ಪಿಸಲು ಸುಳ್ಳಿನ ಕಥೆ
ಪ್ರಕರಣದ ತನಿಖೆ ವೇಳೆ ಆರೋಪಿ ಅಂಬರೀಶ್, ಪೊಲೀಸರನ್ನು ದಿಕ್ಕು ತಪ್ಪಿಸಲು ಮತ್ತೊಂದು ಕಥೆ ಹೆಣೆದಿದ್ದಾನೆ. ಮೃತನ ವೈಯಕ್ತಿಕ ಪರಿಚಯದವರೇ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಘಟನಾ ಸ್ಥಳದಲ್ಲಿ ಬೈಕ್ ಮಾತ್ರ ಪತ್ತೆಯಾಗಿದ್ದ ಕಾರಣ ಆರಂಭದಲ್ಲಿ ಪ್ರಕರಣ ತನಿಖಾಧಿಕಾರಿಗಳಿಗೆ ಸವಾಲಾಗಿತ್ತು.
ಶ್ವಾನದಳದ ಸುಳಿವಿನಿಂದ ಬಯಲಾಯ್ತು ಸತ್ಯ
ಪ್ರಕರಣದ ಭೇದನೆಯಲ್ಲಿ ಪೊಲೀಸ್ ಶ್ವಾನದಳ ಮಹತ್ವದ ಪಾತ್ರ ವಹಿಸಿದೆ. ಘಟನಾ ಸ್ಥಳದಿಂದ ಸಂಗ್ರಹಿಸಿದ ವಾಸನೆಯ ಆಧಾರದಲ್ಲಿ ಶ್ವಾನ ನೇರವಾಗಿ ಆರೋಪಿ ಅಂಬರೀಶ್ನತ್ತ ತೆರಳಿದೆ. ಬಳಿಕ ಆತನ ಬಟ್ಟೆ ಹಾಗೂ ಚಪ್ಪಲಿಯಲ್ಲಿ ಪತ್ತೆಯಾದ ರಕ್ತದ ಕಲೆಗಳು ಸೇರಿದಂತೆ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ಅಂಬರೀಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tags:#Mandya #KRPete #MandyaPolice #MurderCase #CrimeNews #DogSquad #BirthdayMurder #KarnatakaCrime #BreakingNews #KannadaNews #Mysuru #PoliceInvestigation #CrimeStory #TrendingNews #LatestNews #KarunaaduTimes #KarnatakaNews #Justice #ExclusiveNews #ViralNews
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update