ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಕಾರ್ಯಾಚರಣೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಖಾಸಗಿ ವ್ಯಾಪಾರಿಗಳ ಬಳಿಕ ಇದೀಗ ಸರ್ಕಾರಿ ಸ್ವಾಮ್ಯದ ನಂದಿನಿ ಬೂತ್, ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಫುಟ್ಪಾತ್ಗೆ ಅಡ್ಡಿಯಾಗಿರುವ ಕೆಲವು ಸಾರ್ವಜನಿಕ ಸೌಲಭ್ಯಗಳ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.
ನಗರದಾದ್ಯಂತ ಸುಮಾರು 1,500 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದು, ಈವರೆಗೆ 500 ಕಿಲೋಮೀಟರ್ಗೂ ಹೆಚ್ಚು ಮಾರ್ಗವನ್ನು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.
ಇದುವರೆಗೆ ಫುಟ್ಪಾತ್ನಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಅದೇ ಫುಟ್ಪಾತ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಬೂತ್, ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಬೆಸ್ಕಾಂಗೆ ಸೇರಿದ ಕೆಲವು ಟ್ರಾನ್ಸ್ಫಾರ್ಮರ್ಗಳ ವಿರುದ್ಧ ಕ್ರಮ ಏಕೆ ಇಲ್ಲ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ನಿರಂತರವಾಗಿ ಎತ್ತುತ್ತಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, "ಕಾನೂನು ಎಲ್ಲರಿಗೂ ಒಂದೇ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಫುಟ್ಪಾತ್ ಮೇಲೆ ಇರುವ ಸರ್ಕಾರಿ ಮಳಿಗೆಗಳ ವಿಚಾರವನ್ನೂ ಪರಿಶೀಲಿಸಲಾಗುತ್ತಿದೆ. ಅಗತ್ಯವಿದ್ದರೆ ಅವುಗಳ ಸ್ಥಳಾಂತರ ಅಥವಾ ತೆರವು ಕುರಿತು ಸಂಬಂಧಿತ ಇಲಾಖೆಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಂದಿನಿ ಬೂತ್, ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಫುಟ್ಪಾತ್ಗೆ ಅಡ್ಡಿಯಾಗಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಳಾಂತರಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ನಡೆಯುತ್ತಿದೆ ಎನ್ನಲಾಗಿದೆ.
ಆದರೆ, ಖಾಸಗಿ ವ್ಯಾಪಾರಿಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡಿರುವಂತೆ ಸರ್ಕಾರಿ ಸಂಸ್ಥೆಗಳ ಮೇಲೂ ಸಮಾನವಾಗಿ ಕ್ರಮ ಜರುಗುತ್ತದೆಯೇ ಅಥವಾ ಈ ಘೋಷಣೆ ಕೇವಲ ಮಾತಿನಲ್ಲೇ ಉಳಿಯುತ್ತದೆಯೇ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
Tags: #Bengaluru #Footpath #FootpathClearance #Encroachment #NandiniBooth #HOPCOMS #BBMP #BESCOM #KarnatakaNews #BengaluruNews #KannadaNews #BreakingNews #CivicIssues #UrbanDevelopment #KarunaaduTimes #LatestNews #TrendingNews #PublicSafety #FootpathOperation #CityNews
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update