ಹೂವಿನಹಡಗಲಿ, ವಿಜಯನಗರ:ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಗಿರಿಯಾಪುರ ಮಠದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವಿನ ಭಿನ್ನಾಭಿಪ್ರಾಯ ಗಂಭೀರ ಸ್ವರೂಪ ಪಡೆದು, ಬಣ ಬಡಿದಾಟಕ್ಕೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವೇಳೆ ಹಾಸ್ಟೆಲ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾನಿಗೊಳಗಾಗಿದ್ದು, ಶಾಲಾ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೇಲೆ 10ನೇ ತರಗತಿ ವಿದ್ಯಾರ್ಥಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಕಿರಿಯ ವಿದ್ಯಾರ್ಥಿಗಳಿಂದ ಬಲವಂತವಾಗಿ ಬಟ್ಟೆ ತೊಳೆಸುವುದು, ಅವರ ಆಹಾರವನ್ನು ಕಸಿದುಕೊಳ್ಳುವುದು ಹಾಗೂ ಬೆದರಿಕೆ ಹಾಕುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದು, ಇದೇ ವಿಚಾರ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.
ಭಾನುವಾರ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಪರಸ್ಪರ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬೆಳವಣಿಗೆ ಕಂಡಿದೆ. ವಿಷಯ ತಿಳಿದು ಹಿರೇಹಡಗಲಿ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.
ಆದರೆ, ಸೋಮವಾರ ಬೆಳಗಿನ ಪ್ರಾರ್ಥನೆ ವೇಳೆ ಮತ್ತೆ ಉದ್ವಿಗ್ನತೆ ಉಂಟಾಗಿ ವಿದ್ಯಾರ್ಥಿಗಳ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಈ ಗಲಾಟೆಯಲ್ಲಿ ಹಾಸ್ಟೆಲ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾನಿಗೊಳಗಾಗಿವೆ.
ಘಟನೆಯ ಬಳಿಕ ಶಾಲಾ ಆಡಳಿತ ಪೋಷಕರ ಸಭೆ ಕರೆದಿದ್ದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಪೋಷಕರು ಆಗಮಿಸದ ಕಾರಣ ಸಭೆ ಫಲಪ್ರದವಾಗಲಿಲ್ಲ. ಬಳಿಕ ಮಂಗಳವಾರ ಶಾಲೆಗೆ ಆಗಮಿಸಿದ ಕೆಲ ಪೋಷಕರು, ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡುವಲ್ಲಿ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪೋಷಕರ ಆರೋಪದಂತೆ, ಕೆಲ ಹಿರಿಯ ವಿದ್ಯಾರ್ಥಿಗಳು ರಾತ್ರಿ ವೇಳೆ ಪ್ರತ್ಯೇಕವಾಗಿ ಮಾಂಸದ ಅಡುಗೆ ಮಾಡುವುದು, ಕಿರಿಯ ವಿದ್ಯಾರ್ಥಿಗಳ ಆಹಾರವನ್ನು ಬಳಸಿಕೊಳ್ಳುವುದು ಹಾಗೂ ವಿವಿಧ ರೀತಿಯ ಒತ್ತಡ ಮತ್ತು ಕಿರುಕುಳ ನೀಡುತ್ತಿರುವ ಪರಿಣಾಮ ಕೆಲ ವಿದ್ಯಾರ್ಥಿಗಳು ಶಾಲೆ ತೊರೆದು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಹಿರೇಹಡಗಲಿ ಪೊಲೀಸರು ಮತ್ತೊಮ್ಮೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಸ್ತು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
Tags: #Hoovinahadagali #MorarjiDesaiResidentialSchool #VijayanagaraNews #KarnatakaNews #StudentsFight #SchoolHostel #CCTVDamage #ParentsProtest #HireHadagali #EducationNews #HostelIssue #SSLCStudents #KannadaNews #BreakingNews #KarunaaduTimes #ಹೂವಿನಹಡಗಲಿ #ವಿಜಯನಗರ #ಮೊರಾರ್ಜಿ_ದೇಸಾಯಿ_ವಸತಿ_ಶಾಲೆ #ವಿದ್ಯಾರ್ಥಿಗಳ_ಬಣಬಡಿದಾಟ #ಪೋಷಕರ_ಪ್ರತಿಭಟನೆ #ಕರ್ನಾಟಕ_ಸುದ್ದಿ #ಕನ್ನಡ_ಸುದ್ದಿ #KarunaaduTimes #wwwkarunaadutimescom
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update