ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ 'ಯಶಸ್ವಿ' ತನ್ನ 22ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು, 23ನೇ ವಸಂತಕ್ಕೆ ಕಾಲಿಟ್ಟಿದೆ. ಈ ವಿಶೇಷ ಸಂದರ್ಭದಲ್ಲಿ ಕಾಶಿಕಟ್ಟೆಯ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನೆರವೇರಿಸಿ, ಆನೆಗೆ ಹಣ್ಣು, ಕಬ್ಬು ಹಾಗೂ ನೆಚ್ಚಿನ ಆಹಾರವನ್ನು ಅರ್ಪಿಸಿ ಶುಭ ಹಾರೈಸಲಾಯಿತು.
ಭಕ್ತರ ಅಪಾರ ಪ್ರೀತಿ ಗಳಿಸಿರುವ ಯಶಸ್ವಿ, ದೇವಸ್ಥಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಭಕ್ತರಿಗೆ ತನ್ನ ಸೊಂಡಿಲಿನಿಂದ ಆಶೀರ್ವಾದ ನೀಡುವ ಈ ಗಜರಾಣಿ, ದೇವಾಲಯದ ಆಧ್ಯಾತ್ಮಿಕ ವಾತಾವರಣಕ್ಕೆ ವಿಶೇಷ ಮೆರುಗು ನೀಡುತ್ತದೆ.
ಯಶಸ್ವಿ 2004ರ ಜುಲೈ 18ರಂದು ಜನಿಸಿತ್ತು. ಬಳಿಕ 2007ರ ಡಿಸೆಂಬರ್ 29ರಂದು ಬಳ್ಳಾರಿ ಶಾಸಕ ಆನಂದ್ ಸಿಂಗ್ ಅವರು ಸೇವಾರೂಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಿದ್ದರು. ಆಗ ಕೇವಲ ಮೂರು ವರ್ಷದ ಹೆಣ್ಣಾನೆಯಾಗಿದ್ದ ಇದಕ್ಕೆ ದೇವಸ್ಥಾನದಲ್ಲಿ 'ಯಶಸ್ವಿ' ಎಂದು ನಾಮಕರಣ ಮಾಡಿ ವಿಶೇಷ ತರಬೇತಿ ನೀಡಲಾಯಿತು.
ದೇವಸ್ಥಾನದ ಹಿಂದಿನ ಆನೆ ಇಂದುಮತಿ ನಿಧನರಾದ ಬಳಿಕ, ಯಶಸ್ವಿಯೇ ದೇವಾಲಯದ ಪ್ರಮುಖ ಧಾರ್ಮಿಕ ಸೇವೆಗಳನ್ನು ನಿರ್ವಹಿಸುತ್ತಿದೆ. ಪ್ರತಿದಿನ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿ ಗರ್ಭಗುಡಿಯ ಮುಂಭಾಗ ಎರಡು ಕಾಲು ಮಡಚಿ ಸೊಂಡಿಲೆತ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ನಮಸ್ಕರಿಸುವ ದೃಶ್ಯ ಭಕ್ತರಲ್ಲಿ ಭಕ್ತಿ ಮತ್ತು ಭಾವನೆಯನ್ನು ಮೂಡಿಸುತ್ತದೆ.
ಬ್ರಹ್ಮರಥೋತ್ಸವ, ಜಾತ್ರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗುವ ಯಶಸ್ವಿ, ಚಾಮರ ಸೇವೆ ಸಲ್ಲಿಸುವುದರ ಜೊತೆಗೆ ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತದೆ. ಮಧ್ಯಾಹ್ನದ ಮಹಾಪೂಜೆ ವೇಳೆ ದೇವಸ್ಥಾನಕ್ಕೆ ಆಗಮಿಸಿ ಭಕ್ತರ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸುವುದು ಅದರ ವಿಶೇಷ ಸೇವೆಯಾಗಿದೆ.
ಯಶಸ್ವಿಗೆ ನೀರಿನಲ್ಲಿ ಆಟವಾಡುವುದು ಅತ್ಯಂತ ಇಷ್ಟ. ಮಾವುತರು ಸ್ನಾನ ಮಾಡಿಸುವ ವೇಳೆ ನೀರಿನಲ್ಲಿ ತುಂಟಾಟವಾಡುವ ಯಶಸ್ವಿಯ ಆಟವನ್ನು ನೋಡಲು ಭಕ್ತರು ಮತ್ತು ಪ್ರವಾಸಿಗರು ಕಾತರದಿಂದ ಕಾಯುತ್ತಾರೆ. ಈ ಮುದ್ದಾದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಯಶಸ್ವಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿವೆ.
ಹುಟ್ಟು ಹಬ್ಬದ ಆಚರಣೆಯಿಂದ ಅರ್ಚಕರು ಮತ್ತು ಭಕ್ತರೊಡಗೂಡಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕುಕ್ಕೆಸುಬ್ರಹ್ಮಣ್ಯ ದೇವಾಲಯದ ಆಡಳಿತಾಧಿಕಾರಿ (ಇಓ) ಯೇಸುರಾಜ್ ತಿಳಿಸಿದ್ದಾರೆ.
22ನೇ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಯಶಸ್ವಿಯ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಭಕ್ತರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
Tags:#ಕುಕ್ಕೆ_ಶ್ರೀ_ಸುಬ್ರಹ್ಮಣ್ಯ #ಯಶಸ್ವಿ #Yashasvi #KukkeSubrahmanya #Subrahmanya #DakshinaKannada #TempleElephant #Elephant #Karnataka #KarnatakaNews #KannadaNews #ViralNews #BirthdayCelebration #Devotional #Temple #Spiritual #KarunaaduTimes #ದಕ್ಷಿಣಕನ್ನಡ #ಸುಬ್ರಹ್ಮಣ್ಯ #ಆನೆ #ದೇವಸ್ಥಾನ #ಹುಟ್ಟುಹಬ್ಬ #ವೈರಲ್_ಸುದ್ದಿ #ಕರ್ನಾಟಕ_ಸುದ್ದಿ #ಕನ್ನಡ_ನ್ಯೂಸ್
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update