ಮೈಸೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR – Special Intensive Revision) ಕಾರ್ಯದಲ್ಲಿ ನಿರತರಾಗಿದ್ದ ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿ, ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ ಆರೋಪದಡಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, SIR ಕರ್ತವ್ಯ ನಿರ್ವಹಿಸುತ್ತಿದ್ದ ಲತಾ ಎಂಬ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, ಜುಲೈ 13ರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಆರೋಪಿಯು ಲತಾ ಅವರ ಮನೆಗೆ ನುಗ್ಗಿ, ಗ್ರಾಮದಲ್ಲಿನ ಸುಮಾರು 300 ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಮಹಿಳೆಯ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದು, "ಇನ್ನು ಮುಂದೆ ನಮ್ಮ ಗ್ರಾಮದಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯೋ ನೋಡುತ್ತೇನೆ, ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ" ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದುದು, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದುದು ಹಾಗೂ ಬೆದರಿಕೆ ಒಡ್ಡಿದ ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Tags: #Mysuru #Nanjangud #SIR #VoterListRevision #FIR #CrimeNews #WomenSafety #Police #KarnatakaNews #BreakingNews #KannadaNews #KarunaaduTimes #LatestNews #MysoreNews #ElectionNews
🌐 Visit: www.karunaadutimes.com�
📲 Fast • Trusted • Kannada News 24×7
⭐ Follow Karunaadu Times for Every Big Update