ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಭಾನುವಾರ ಬೆಂಗಳೂರಿನಿಂದ ಹಾಸನ ಜಿಲ್ಲೆಯತ್ತ ಭಾವಪೂರ್ಣ ವಾತಾವರಣದಲ್ಲಿ ಆರಂಭವಾಯಿತು. ಕುಟುಂಬ ಸದಸ್ಯರು, ಬಂಧುಗಳು, ರಾಜಕೀಯ ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಣ್ಣೀರಿನ ನಮನ ಸಲ್ಲಿಸಿ ಅಂತಿಮ ಬೀಳ್ಕೊಟ್ಟರು.
ಅಂತಿಮ ಯಾತ್ರೆಗೆ ಮುನ್ನ ನಡೆದ ಕುಟುಂಬದ ಪೂಜಾ ವಿಧಿವಿಧಾನಗಳು ನೋಡುಗರ ಮನ ಕಲಕುವಂತಿದ್ದವು. ಹೆಚ್.ಡಿ. ದೇವೇಗೌಡರು ಪತ್ನಿಯ ಹಣೆಗೆ ಕುಂಕುಮವಿಟ್ಟು, ತಲೆಗೆ ಹೂವನ್ನಿಟ್ಟು ಅಂತಿಮ ಗೌರವ ಸಲ್ಲಿಸಿದರು. ಬಳಿಕ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬ ಸದಸ್ಯರು ಅಂತಿಮ ಪೂಜೆ ನೆರವೇರಿಸಿ ಭಾವುಕರಾದರು.
ಚೆನ್ನಮ್ಮ ಅವರ ಸಾರ್ವಜನಿಕ ಸೇವೆ ಮತ್ತು ಸಮಾಜಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿ ಪಾರ್ಥಿವ ಶರೀರಕ್ಕೆ ಭಾರತದ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಅಲ್ಲಿದ್ದ ಅನೇಕರು ಕಣ್ಣೀರಿನಿಂದಲೇ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.
ಅಂತಿಮ ಯಾತ್ರೆ ಸಾಗುತ್ತಿದ್ದ ವಾಹನದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಬೆಂಗಳೂರಿನಿಂದ ಹೊರಟ ಮೆರವಣಿಗೆ ಮಾರ್ಗದುದ್ದಕ್ಕೂ ಅಭಿಮಾನಿಗಳು ಮತ್ತು ಸಾರ್ವಜನಿಕರು ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
ಅಂತಿಮ ಯಾತ್ರೆಯ ಪ್ರಮುಖ ಮಾರ್ಗಗಳು
ನೆಲಮಂಗಲ ಕ್ರಾಸ್
ಸೋಲೂರು ಕ್ರಾಸ್
ಮರೂರು ಹ್ಯಾಂಡ್ ಪೋಸ್ಟ್
ಕುಣಿಗಲ್ ಕ್ರಾಸ್
ಬೆಳ್ಳೂರು ಕ್ರಾಸ್
ಕದಬಳ್ಳಿ ಕ್ರಾಸ್
ಹಿರಿಸಾವೆ ಕ್ರಾಸ್
ಚನ್ನರಾಯಪಟ್ಟಣ
ಎಲೆಯೂರು (ಉದಯಪುರ)
ಶಾಂತಿಗ್ರಾಮ
ಬೂವನಹಳ್ಳಿ ಕ್ರಾಸ್
ಹಾಸನ ಡೈರಿ ಸರ್ಕಲ್
ಎನ್.ಆರ್. ಸರ್ಕಲ್
ಮೊಸಳೆ ಹೊಸಹಳ್ಳಿ
ಅಂತಿಮ ದರ್ಶನದ ವ್ಯವಸ್ಥೆ
ಭಾನುವಾರ ರಾತ್ರಿ ಹೊಳೆನರಸೀಪುರದಲ್ಲಿರುವ ಹೆಚ್.ಡಿ. ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ (ಜುಲೈ 20) ಬೆಳಗ್ಗೆ 7:00 ರಿಂದ 9:30 ಗಂಟೆಯವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು.
ಬಳಿಕ ಬೆಳಗ್ಗೆ 10 ಗಂಟೆಗೆ ಅಂತಿಮ ಯಾತ್ರೆ ಹೊಳೆನರಸೀಪುರದಿಂದ ಹೊರಟು, 11:30ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ 2 ರಿಂದ 4:15 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಚೆನ್ನಮ್ಮ ಅವರ ಅಗಲಿಕೆ ದೇವೇಗೌಡ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯದ ರಾಜಕೀಯ ವಲಯಕ್ಕೂ ಭಾರೀ ನಷ್ಟವಾಗಿದೆ. ಹಲವು ರಾಜಕೀಯ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Tags#Chennamma #HDDeveGowda #HDKumaraswamy #Hassan #Holenarasipura #FinalJourney #Funeral #KarnatakaNews #BreakingNews #PoliticalNews #KannadaNews #KarunaaduTimes #TrendingNews #Mandya #Bengaluru #JDS #Tribute #LastRespect #Karnataka #NewsUpdate