ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಕಲ್ಲಹಳ್ಳಿ ಶ್ರೀ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಾಹನಾಥ ಸ್ವಾಮಿ ದೇವಾಲಯದಲ್ಲಿ ರೇವತಿ ನಕ್ಷತ್ರದ ಅಂಗವಾಗಿ ನಡೆದ ವಿಶೇಷ ಪೂಜಾ ಮಹೋತ್ಸವ ಭಕ್ತಿಭಾವದ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ದಿನವಿಡೀ ದೇವಾಲಯದಲ್ಲಿ "ಗೋವಿಂದ... ಶ್ರೀನಿವಾಸ..." ಎಂಬ ಜಯಘೋಷಗಳು ಮೊಳಗುತ್ತಿದ್ದರೆ, ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೈವದ ಕೃಪೆಗೆ ಪಾತ್ರರಾದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ ಶರಣ್ ಹಾಗೂ ಕುಟುಂಬದವರು, ರಾಜ್ಯದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ದಂಪತಿ, ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ಕೃಷ್ಣ ಅವರ ಧರ್ಮಪತ್ನಿ ಇಂದ್ರಮ್ಮ ಕೃಷ್ಣ ಮತ್ತು ಕುಟುಂಬದವರು, ಆಂಧ್ರಪ್ರದೇಶದ ಧರ್ಮಾವರಂ ಕ್ಷೇತ್ರದ ಶಾಸಕ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿ ಶ್ರೀವರಹನಾಥ ಸ್ವಾಮಿಯ ದರ್ಶನ ಪಡೆದರು.
ರೇವತಿ ನಕ್ಷತ್ರದ ಪಾವನ ಸಂದರ್ಭದಲ್ಲಿ ಸ್ವಾಮಿಗೆ ವೈದಿಕ ಸಂಪ್ರದಾಯದಂತೆ ಅಭಿಷೇಕ, ಪುಷ್ಪಾಭಿಷೇಕ, ಪಟ್ಟಾಭಿಷೇಕ, ವರಾಹ ಹೋಮ ಹಾಗೂ ಶ್ರೀನಿವಾಸ ಕಲ್ಯಾಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸುಮಾರು 1,000 ಲೀಟರ್ ಹಾಲು, 500 ಲೀಟರ್ ಎಳನೀರು, ಕಬ್ಬಿನ ರಸ, ಮೊಸರು, ಜೇನುತುಪ್ಪ, ಹಸುವಿನ ತುಪ್ಪ, ಗಂಗಾಜಲ, ಶ್ರೀಗಂಧ, ಅರಿಶಿಣ ಸೇರಿದಂತೆ ವಿವಿಧ ಪವಿತ್ರ ದ್ರವ್ಯಗಳಿಂದ ಮಹಾಭಿಷೇಕ ನಡೆಸಲಾಯಿತು. ನಂತರ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಕಮಲ, ತುಳಸಿ ಸೇರಿದಂತೆ 58ಕ್ಕೂ ಹೆಚ್ಚು ಬಗೆಯ ಅಪರೂಪದ ಹೂಗಳಿಂದ ಪುಷ್ಪಾಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಾಲಯದ ವ್ಯವಸ್ಥಾಪನ ಸಮಿತಿಯ ಸಂಚಾಲಕ ಡಾ. ಶ್ರೀನಿವಾಸ ರಾಘವನ್ ಮಾತನಾಡಿ, ಹಿರಣ್ಯಾಕ್ಷನ ಸಂಹಾರದ ಬಳಿಕ ಭೂದೇವಿಯನ್ನು ಉದ್ಧರಿಸಿದ ಶ್ರೀಮಹಾವಿಷ್ಣುವಿನ ವರಾಹಾವತಾರದ ಮಹತ್ವವನ್ನು ಸ್ಮರಿಸುವ ದಿನವೇ ರೇವತಿ ನಕ್ಷತ್ರವಾಗಿದ್ದು, ಇದೇ ಹಿನ್ನೆಲೆಯಲ್ಲಿ ಪ್ರತಿವರ್ಷ ಈ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ವಿಶ್ವದಲ್ಲೇ ಅಪರೂಪವೆಂದು ಪರಿಗಣಿಸಲ್ಪಡುವ ಸುಮಾರು 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಿಂದ ನಿರ್ಮಿತ ಶ್ರೀಲಕ್ಷ್ಮೀ ವರಾಹನಾಥ ಸ್ವಾಮಿಯ ವಿಗ್ರಹಕ್ಕೆ ವಿಶೇಷ ಅಭಿಷೇಕ ಹಾಗೂ ಪಟ್ಟಾಭಿಷೇಕ ನೆರವೇರಿಸಲಾಗಿದ್ದು, ಲೋಕಕ್ಷೇಮ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.
ಶ್ರೀಕ್ಷೇತ್ರವನ್ನು ತಿರುಮಲ-ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದ್ದು, ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ಸಂಪೂರ್ಣ ಗ್ರಾನೈಟ್ ಕಲ್ಲಿನಿಂದ ದೇವಾಲಯ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ನಾಲ್ಕು ದಿಕ್ಕುಗಳಲ್ಲಿ 56 ಅಡಿ ಎತ್ತರದ ರಾಜಗೋಪುರಗಳು, ಬೃಹತ್ ಮುಖಮಂಟಪ ಹಾಗೂ ಸುಮಾರು 186 ಅಡಿ ಎತ್ತರದ ಮಹಾರಾಜಗೋಪುರ ನಿರ್ಮಾಣವೂ ಯೋಜನೆಯ ಭಾಗವಾಗಿದೆ.
ಪರಕಾಲ ಮಠದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಮಹತ್ವದ ಕಾಮಗಾರಿಗೆ ಆಧುನಿಕ ಕಲ್ಲು ಕೆತ್ತನೆ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಭಕ್ತರ ಕಾಣಿಕೆ ಹಾಗೂ ದೇಣಿಗೆಯ ಮೂಲಕವೇ ಸಂಪೂರ್ಣ ಯೋಜನೆಗೆ ಹಣ ಸಂಗ್ರಹಿಸಲಾಗುತ್ತಿದೆ.
ಪ್ರಸ್ತುತ ಶ್ರೀಕ್ಷೇತ್ರದಲ್ಲಿ ಗೋಶಾಲೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾವಿರಾರು ಭಕ್ತರಿಗೆ ಉಚಿತ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಶೀಘ್ರದಲ್ಲೇ ವೇದ ಪಾಠಶಾಲೆಯನ್ನೂ ಆರಂಭಿಸುವ ಯೋಜನೆ ಇದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲರ ಪುತ್ರ ಶ್ರೀನಿವಾಸ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.
Tags: #KarunaaduTimes #Kallahalli #VarahanathaSwamy #RevathiNakshatra #Mandya #KRPete #TempleFestival #SpiritualKarnataka #KannadaNews #Devotional #Govinda #SriVaraha #HinduTemple #Karnataka #BreakingNews #ViralNews #Kannada #DailyNews #TempleUpdates #Bhakthi