ಬೆಂಗಳೂರು, ಜು. 7: ನಗರದಲ್ಲಿ ಅಕ್ರಮ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣೆ ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಮಾದನಾಯಕನಹಳ್ಳಿ ಪೊಲೀಸರು, ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಚೇತನ್ ಕುಮಾರ್ (40) ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆತ ನಗರದ ವಿವಿಧ ಭಾಗಗಳಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದು, ಹಲವು ವರ್ಷಗಳಿಂದ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ನಗರದ ವಿವಿಧೆಡೆ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಆತನ ಮೇಲಿದೆ. ಈ ಸಂಬಂಧ ಪೀಣ್ಯ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಆರೋಪಿ ತನ್ನ ಗುರುತನ್ನು ಮರೆಮಾಚಲು ವಿವಿಧ ರೀತಿಯ ವೇಷಧಾರಣೆ ಮಾಡುತ್ತಿದ್ದ ಕಾರಣ, ಹಲವು ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ಜುಲೈ 6ರಂದು ಪೀಣ್ಯ ಸಮೀಪದ ಒಂದು ಕೊಠಡಿಯಲ್ಲಿ ದಾಳಿ ನಡೆಸಿದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಲಾಗಿದ್ದು, ಜಾಲಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪೊಲೀಸರು ಈ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆ ಹಾಗೂ ಅಕ್ರಮ ವೇಶ್ಯಾವಾಟಿಕೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.