ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಗಾವಟೂರು ಗ್ರಾಮದಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 10 ರಿಂದ 15 ದಿನ ಪ್ರಾಯದ ನವಜಾತ ಹೆಣ್ಣುಮಗುವನ್ನು ಬ್ಯಾಗ್ನಲ್ಲಿ ಇರಿಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಬಳಿ ಮಗುವಿನ ಅಳುವ ಶಬ್ದ ಕೇಳಿಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಪರಿಶೀಲಿಸಿದಾಗ, ಬಿಳಿ ಬಣ್ಣದ ಬ್ಯಾಗ್ನೊಳಗೆ ಬಿಳಿ ಬಟ್ಟೆಯಲ್ಲಿ ಸುತ್ತಿ ಇರಿಸಲಾಗಿದ್ದ ನವಜಾತ ಹೆಣ್ಣುಮಗು ಪತ್ತೆಯಾಗಿದೆ.
ಬ್ಯಾಗ್ನಲ್ಲಿ ಮಗುವಿಗೆ ಹಾಲುಣಿಸಲು ಹಾಲಿನ ಬಾಟಲಿಯನ್ನೂ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಗ್ರಾಮಸ್ಥರು ಕೂಡಲೇ ರಿಪ್ಪನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ನಂತರ ಹೆಚ್ಚಿನ ಆರೈಕೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರ ಪ್ರಕಾರ, ಮಗು ಆರೋಗ್ಯವಾಗಿದ್ದು ವೈದ್ಯಕೀಯ ನಿಗಾದಲ್ಲಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಗುವನ್ನು ಬಿಟ್ಟು ಹೋದವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
#KarunaaduTimes #Shivamogga #Hosanagara #Gavaturu #NewbornBaby #BabyGirl #Ripponpet #MegganHospital #BreakingNews #KarnatakaNews #Humanity #LatestNews #KannadaNews #ViralNews #PoliceInvestigation #KarunaaduTimesExclusive