ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿಯ ಕುತ್ತಿಗೆಗೆ ವಿದ್ಯುತ್ ವೈರ್ ಬಿಗಿದು ಹತ್ಯೆ ಮಾಡಿದ ಆರೋಪದಲ್ಲಿ ಪತಿ ಪರಾರಿಯಾಗಿದ್ದು, ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತ ಮಹಿಳೆಯನ್ನು 35 ವರ್ಷದ ಪವಿತ್ರಾ ಎಂದು ಗುರುತಿಸಲಾಗಿದೆ. ಕೊಲೆ ಆರೋಪ ಎದುರಿಸುತ್ತಿರುವ ಪತಿ ವೆಂಕಟೇಶ್ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗೆ ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ವೆಂಕಟೇಶ್ಗೆ ಮದ್ಯಪಾನದ ಚಟವಿದ್ದಲ್ಲದೆ, ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಮನೆಯನ್ನೂ ಒತ್ತೆಯಿಟ್ಟಿದ್ದ ವಿಚಾರದಿಂದ ಇತ್ತೀಚೆಗೆ ಕುಟುಂಬದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದೇ ವಿವಾದ ತೀವ್ರ ಸ್ವರೂಪ ಪಡೆದು ಪತ್ನಿಯ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಘಟನೆಯ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಪರಾರಿಯಾಗಿರುವ ಆರೋಪಿ ವೆಂಕಟೇಶ್ನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.