ಶಿವಮೊಗ್ಗ: ಜೈಲು ಎಂದರೆ ಶಿಕ್ಷೆ, ಅಪರಾಧ ಮತ್ತು ಬಂಧನ ಎಂಬ ಕಲ್ಪನೆಗೆ ಹೊಸ ಅರ್ಥ ನೀಡುವ ವಿಶಿಷ್ಟ ಪ್ರಯೋಗವೊಂದು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ನಗರದಲ್ಲಿ ಪ್ರತಿದಿನ ಕಸ ಸಂಗ್ರಹಿಸುವ ವಾಹನಗಳಿಂದ ಕೇಳಿಬರುವ ಸ್ವಚ್ಛತಾ ಜಾಗೃತಿ ಹಾಡುಗಳಿಗೆ ಧ್ವನಿ ನೀಡಿರುವವರು ವೃತ್ತಿಪರ ಗಾಯಕರು ಅಲ್ಲ, ಬದಲಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳು.
ಜೂನ್ 11ರಿಂದ ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವ ಘನ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ “ಬನ್ನಿರಣ್ಣ, ಬನ್ನಿರಕ್ಕ… ಕಸ ವಿಲೇವಾರಿ ಗಾಡಿ ಬಂದೈತೆ…” ಎಂಬ ಜಾಗೃತಿ ಗೀತೆಗಳು ಕೇಳಿಬರುತ್ತಿವೆ. ಈ ಹಾಡುಗಳು ನಾಗರಿಕರಲ್ಲಿ ಕಸ ವಿಂಗಡಣೆ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿವೆ.
ಈ ವಿನೂತನ ಉಪಕ್ರಮದಡಿ ಕುಂದಾಪುರ ಮೂಲದ ಕೈದಿ ಚಂದ್ರ ಹೆಮ್ಮಾಡಿ ಆರು ಜಾಗೃತಿ ಗೀತೆಗಳನ್ನು ರಚಿಸಿದ್ದು, ಇತರ ಕೈದಿಗಳೊಂದಿಗೆ ಅವುಗಳಿಗೆ ಧ್ವನಿ ನೀಡಿದ್ದಾರೆ. ಕೈದಿಗಳಲ್ಲಿದ್ದ ಕಲಾತ್ಮಕ ಪ್ರತಿಭೆಯನ್ನು ಗುರುತಿಸಿ ಸಮಾಜಮುಖಿ ಕಾರ್ಯಕ್ಕೆ ಬಳಸುವ ಪ್ರಯತ್ನಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ. ರಂಗನಾಥ್ ಮುನ್ನಡೆ ನೀಡಿದ್ದಾರೆ.
ಇದಕ್ಕೂ ಮೊದಲು ಭದ್ರಾವತಿ ಆಕಾಶವಾಣಿಯಲ್ಲಿ ಪ್ರಸಾರವಾದ 'ಜೈಲು ಹಕ್ಕಿಗಳ ಗಾನಸುಧೆ' ಕಾರ್ಯಕ್ರಮದಲ್ಲೂ ಇದೇ ಕೈದಿಗಳು ಜನಪದ, ಭಾವಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದರು. ಇದೀಗ ಅದೇ ಪ್ರತಿಭೆ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಹೊಸ ಆಯಾಮ ನೀಡಿದೆ.
ಹಾಡುಗಳ ಮೂಲಕ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವುದು, ಮನೆಯಲ್ಲೇ ಸಾವಯವ ಗೊಬ್ಬರ ತಯಾರಿಸುವುದು, ತ್ಯಾಜ್ಯ ಮರುಬಳಕೆ, ಬಯೋಗ್ಯಾಸ್ ಉತ್ಪಾದನೆ ಹಾಗೂ ನಗರವನ್ನು ಸ್ವಚ್ಛವಾಗಿಡುವ ಅಗತ್ಯವನ್ನು ಸರಳ ಪದಗಳಲ್ಲಿ ಜನರಿಗೆ ತಲುಪಿಸಲಾಗಿದೆ.
ದಾವಣಗೆರೆ ಮೂಲದ ಕೈದಿ ದಾದಾಪೀರ್ ರಚಿಸಿರುವ ಮತ್ತೊಂದು ಗೀತೆ ಸ್ವಚ್ಛ ಭಾರತ ಅಭಿಯಾನದ ಸಂದೇಶವನ್ನು ಸಾರುತ್ತದೆ. ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಹಾಡಿನ ಮೂಲಕ ಮನದಟ್ಟಾಗಿಸುವ ಪ್ರಯತ್ನ ಮಾಡಲಾಗಿದೆ.
ಮುಖ್ಯ ಕಾರಾಗೃಹ ಅಧೀಕ್ಷಕ ಪಿ. ರಂಗನಾಥ್ ಅವರ ಪ್ರಕಾರ, ಅಪರಾಧ ಪ್ರಕರಣಗಳಲ್ಲಿ ಸಿಲುಕಿರುವ ಕೈದಿಗಳಲ್ಲೂ ಅನೇಕ ಸೃಜನಾತ್ಮಕ ಪ್ರತಿಭೆಗಳು ಅಡಗಿವೆ. ಇಂತಹ ಕಾರ್ಯಕ್ರಮಗಳು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಮಾಜದತ್ತ ಸಕಾರಾತ್ಮಕ ದೃಷ್ಟಿಕೋನ ಬೆಳೆಸಲು ನೆರವಾಗುತ್ತವೆ. ಸುಮಾರು 20ಕ್ಕೂ ಹೆಚ್ಚು ಕೈದಿಗಳು ಗಾಯನದಲ್ಲಿ ಆಸಕ್ತಿ ತೋರಿದ್ದು, ಪರಸ್ಪರ ಅಭ್ಯಾಸದ ಮೂಲಕ ಈ ಹಾಡುಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿದ್ದಾರೆ.
ಕೈದಿಗಳ ಅಭಿಪ್ರಾಯವೂ ಇದೇ. ಜೈಲಿನಲ್ಲಿ ಕೇವಲ ಶಿಕ್ಷೆ ಅನುಭವಿಸುವುದಲ್ಲ, ಜೀವನವನ್ನು ಹೊಸದಾಗಿ ಕಟ್ಟಿಕೊಳ್ಳುವ ಅವಕಾಶವೂ ಸಿಗಬೇಕು ಎನ್ನುವ ಸಂದೇಶವನ್ನು ಅವರು ಈ ಪ್ರಯತ್ನದ ಮೂಲಕ ನೀಡಿದ್ದಾರೆ.