ಕೆ.ಆರ್.ಪೇಟೆ ಮಂಡ್ಯ jilley ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಎಮ್ಮಿಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಎಸ್ಐಆರ್ (SIR) ನೋಂದಣಿ ಪತ್ರಗಳನ್ನು ಮನೆಮನೆಗೆ ತಲುಪಿಸಲು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ಗಳು ಮತ್ತು ಚಿತ್ರಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಪೋಸ್ಟರ್ನಲ್ಲಿ, "ನಮ್ಮ ಮಕ್ಕಳು ಸಂದೇಶವಾಹಕರಲ್ಲ", "ಶಿಕ್ಷಣವೇ ಅಥವಾ ಶೋಷಣೆಯೇ?" ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.
ಮಕ್ಕಳು ಶಾಲೆಯಲ್ಲಿ ಪಾಠ ಕಲಿಯಬೇಕಾದ ಸಮಯದಲ್ಲಿ ಸರ್ಕಾರಿ ಪತ್ರಗಳನ್ನು ವಿತರಿಸುವ ಕೆಲಸ ಮಾಡುತ್ತಿರುವುದು ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುವ ಸಂಗತಿ ಎಂದು ಆರೋಪಿಸಲಾಗಿದೆ. ಶಿಕ್ಷಕರನ್ನು ಬೋಧನೆಗಾಗಿ ನೇಮಕ ಮಾಡಲಾಗಿದೆ ಹೊರತು ಮಕ್ಕಳ ಮೂಲಕ ಸರ್ಕಾರಿ ಕೆಲಸ ಮಾಡಿಸಲು ಅಲ್ಲ.
ಇದಲ್ಲದೆ, ಬಿ.ಎಲ್.ಒ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಏನು? ಈ ಬೆಳವಣಿಗೆ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆಯೇ ಅಥವಾ ಅವರ ಮೌನದಿಂದ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳನ್ನೂ ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಮಕ್ಕಳಿಗೆ ಪುಸ್ತಕ ಮತ್ತು ಶಿಕ್ಷಣ ನೀಡುವ ಬದಲು ಸರ್ಕಾರಿ ಪತ್ರಗಳ ಹೊರೆ ನೀಡಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದ್ದು, ಈ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ