ದೇಹಾರಾಡೋನ್: ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಬದರಿನಾಥ ಧಾಮದಲ್ಲಿ ಭಕ್ತರು ನೀಡಿದ ಕಾಣಿಕೆ ಹಾಗೂ ದೇಣಿಗೆಯ ದುರುಪಯೋಗ ನಡೆದಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ (BKTC) ಪ್ರಕರಣದ ತನಿಖೆಗೆ ಅಧಿಕೃತ ಆದೇಶ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ, ದೇವಸ್ಥಾನದ ಆಡಳಿತದ ಮೇಲೆ ಕೇಳಿಬಂದಿರುವ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಗಳಿಗೆ ಸಂಬಂಧಿಸಿದಂತೆ ಕೆಲ ಸಿಬ್ಬಂದಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದ್ದು, ತಮ್ಮ ವಿರುದ್ಧದ ಆರೋಪಗಳ ಕುರಿತು ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದೇ ವೇಳೆ, ಆರೋಪ ಎದುರಿಸುತ್ತಿರುವ ವ್ಯಕ್ತಿ ತಮ್ಮ ವೈಯಕ್ತಿಕ ಕಾರ್ಯದರ್ಶಿ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಯನ್ನು ಹೇಮಂತ್ ದ್ವಿವೇದಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆತ ತಮ್ಮ ವೈಯಕ್ತಿಕ ಕಾರ್ಯದರ್ಶಿಯಲ್ಲ, ದೇವಸ್ಥಾನ ಸಮಿತಿಯ ಸಾಮಾನ್ಯ ಸಿಬ್ಬಂದಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಕೆಟಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಮಾತನಾಡಿ, ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ಯಾವುದೇ ವ್ಯಕ್ತಿಗೆ ವಿನಾಯಿತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಲಭ್ಯವಿರುವ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತನಿಖೆಯಲ್ಲಿ ಅಕ್ರಮಗಳು ದೃಢಪಟ್ಟರೆ, 'ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ–1939' ಹಾಗೂ ಸಂಬಂಧಿತ ಸೇವಾ ನಿಯಮಗಳ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದೇ ವೇಳೆ, ತನಿಖೆ ಪೂರ್ಣಗೊಳ್ಳುವವರೆಗೆ ವದಂತಿ ಅಥವಾ ಪರಿಶೀಲಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ದೇವಸ್ಥಾನ ಸಮಿತಿ ಸಾರ್ವಜನಿಕರಿಗೆ ಮನವಿ ಮಾಡಿದೆ.
Tags:#Badrinath #BadrinathDham #BKTC #Donation #TempleNews #Uttarakhand #Dehradun #TempleDonation #BreakingNews #IndiaNews #HemantDwivedi #SohanSinghRangad #HinduTemple #KarunaaduTimes