ಚಿಕ್ಕಮಗಳೂರು: ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದ ಕಾರಣಕ್ಕೆ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲೇ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಕೆಲ ದಿನಗಳಿಂದ ಯುವಕ ಅಪ್ರಾಪ್ತ ಬಾಲಕಿಯನ್ನು ನಿರಂತರವಾಗಿ ಸಂಪರ್ಕಿಸಲು ಹಾಗೂ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಕಿರುಕುಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಬಾಲಕಿ ಕೆಲ ದಿನಗಳ ಕಾಲ ಹಾಸ್ಟೆಲ್ನಿಂದ ತನ್ನ ಊರಿಗೆ ತೆರಳಿದ್ದರೂ, ಆರೋಪಿಯು ಕುಟುಂಬದವರ ಸಂಪರ್ಕ ಸಂಖ್ಯೆಯನ್ನು ಪಡೆದು ಪೋಷಕರಿಗೂ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ನಡೆದ ದಿನ, ನಗರದ ಎಸ್ಪಿ ಹಾಗೂ ಡಿಸಿ ಕಚೇರಿ ಸಮೀಪದ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಲಕಿಯನ್ನು ಭೇಟಿಯಾದ ಆರೋಪಿಯು ಮತ್ತೊಮ್ಮೆ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಬಾಲಕಿ ನಿರಾಕರಿಸುತ್ತಿದ್ದಂತೆ ಕೋಪಗೊಂಡ ಯುವಕ ಏಕಾಏಕಿ ಆಕೆಯ ಮೇಲೆ ಹಲ್ಲೆ ನಡೆಸಿ, ಮನಬಂದಂತೆ ಥಳಿಸಿರುವುದಲ್ಲದೆ ಕಾಲಿನಿಂದ ತುಳಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸಾರ್ವಜನಿಕರು ಬರುತ್ತಿರುವುದನ್ನು ಗಮನಿಸಿದ ಆರೋಪಿಯು ಅಲ್ಲಿಂದ ಪರಾರಿಯಾಗಲು ಯತ್ನಿಸಿದರೂ, ಸ್ಥಳೀಯರು ಬೆನ್ನಟ್ಟಿ ಹಿಡಿದು ಎಸ್ಪಿ ನಿವಾಸದ ಸಮೀಪದಲ್ಲಿ ತಡೆದಿದ್ದಾರೆ. ಬಳಿಕ ಮಹಿಳಾ ಸಹಾಯವಾಣಿ (ಅಕ್ಕ ಪಡೆ) ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.
ಗಾಯಗೊಂಡ ಬಾಲಕಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಈ ಘಟನೆ ಅಪ್ರಾಪ್ತರ ಮೇಲಿನ ಕಿರುಕುಳ ಮತ್ತು ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
Tags:#Chikkamagaluru #BreakingNews #KarnatakaNews #MinorGirl #Harassment #Assault #WomenSafety #CrimeNews #LoveHarassment #PublicHelp #ChikkamagaluruNews #Police #KarunaaduTimes #KarnatakaBreaking #CrimeAlert