ಬೆಂಗಳೂರು: ನಗರದ ಹೃದಯಭಾಗವಾದ ಕೆಆರ್ ಸರ್ಕಲ್ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತ ಆತಂಕ ಸೃಷ್ಟಿಸಿದೆ. ಸಿಗ್ನಲ್ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್ಗೆ ಹಿಂದಿನಿಂದ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ, ಎರಡು ಬಿಎಂಟಿಸಿ ಬಸ್ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಸ್ನಲ್ಲಿದ್ದ ಒಟ್ಟು 13 ಮಂದಿ ಪ್ರಯಾಣಿಕರು ವಿವಿಧ ರೀತಿಯ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ವೇಳೆ ಬಸ್ನ ಹಿಂಬದಿ ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಕಾಲು ಬಸ್ನ ಲೋಹದ ಭಾಗಗಳ ನಡುವೆ ಸಿಲುಕಿಕೊಂಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಹಾರೆ ಮತ್ತು ಕಬ್ಬಿಣದ ಕೋಲುಗಳ ಸಹಾಯದಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೊನೆಗೆ ಮಹಿಳೆಯನ್ನು ಸುರಕ್ಷಿತವಾಗಿ ಹೊರತೆಗೆದು ತಕ್ಷಣವೇ ಅಂಬುಲೆನ್ಸ್ ಮೂಲಕ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಯಿತು.
ಘಟನೆಯ ಪರಿಣಾಮ ಎರಡೂ ಬಿಎಂಟಿಸಿ ಬಸ್ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅವುಗಳನ್ನು ತೆರವುಗೊಳಿಸಲು ಕ್ರೇನ್ಗಳ ಸಹಾಯ ಪಡೆಯಲಾಗಿದೆ. ವಾಹನ ತೆರವು ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಹಲವು ಕಿಲೋಮೀಟರ್ಗಳಷ್ಟು ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಟೆಂಪೋ ಚಾಲಕನ ಅಜಾಗರೂಕತೆ ಅಥವಾ ಯಾಂತ್ರಿಕ ದೋಷವೇ ಕಾರಣವೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
Tags:#Bengaluru #KRCircle #BMTC #BMTCBus #RoadAccident #BengaluruTraffic #TempoAccident #BreakingNews #KarnatakaNews #TrafficJam #FireRescue #StMarthasHospital #BengaluruNews #AccidentNews #KarunaaduTimes