ಪಾರ್ವತಿಪುರ (ಆಂಧ್ರಪ್ರದೇಶ): ಶಿಕ್ಷಣವೆಂದರೆ ಕೇವಲ ಪಾಠ ಹೇಳುವುದಲ್ಲ, ಅಗತ್ಯದ ಕ್ಷಣದಲ್ಲಿ ವಿದ್ಯಾರ್ಥಿಗಳ ಬದುಕಿನ ಹೊಣೆ ಹೊರುವುದು ಕೂಡ ಎಂಬುದನ್ನು ಆಂಧ್ರಪ್ರದೇಶದ ಪಾರ್ವತಿಪುರ ಮನ್ಯಂ ಜಿಲ್ಲೆಯ ಶಿಕ್ಷಕಿಯೊಬ್ಬರು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ.
ಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿರುವ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಓದುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿ ಭುವನೇಶ್ವರಿ ಏಕಾಏಕಿ ತೀವ್ರ ಅಸ್ವಸ್ಥಳಾಗಿದ್ದಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದರೂ, ಶಾಲೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಅಥವಾ ತುರ್ತು ಸಾರಿಗೆ ವ್ಯವಸ್ಥೆ ಲಭ್ಯ ಇರಲಿಲ್ಲ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಿಕ್ಷಕಿ ಹೇಮನಿ, ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿನಿಯನ್ನು ತಮ್ಮ ಬೆನ್ನಿಗೆ ಬಟ್ಟೆಯಿಂದ ಭದ್ರವಾಗಿ ಕಟ್ಟಿಕೊಂಡು, ಕಲ್ಲು-ಮುಳ್ಳುಗಳಿಂದ ಕೂಡಿದ ದುರ್ಗಮ ದಾರಿಯಲ್ಲಿ ಸುಮಾರು 6 ಕಿಲೋಮೀಟರ್ ಕಾಲ ಕಾಲ್ನಡಿಗೆಯಲ್ಲೇ ಸಾಗಿದರು. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ಮಾಡಿದರು.
ವೈದ್ಯರ ಪ್ರಾಥಮಿಕ ಚಿಕಿತ್ಸೆ ಬಳಿಕ ವಿದ್ಯಾರ್ಥಿನಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಇದೀಗ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.
ಶಿಕ್ಷಕಿಯ ಈ ಅಪರೂಪದ ಮಾನವೀಯ ಕಾರ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾವಿರಾರು ಮಂದಿ ಅವರ ಸೇವಾಭಾವವನ್ನು ಮೆಚ್ಚಿ ಅಭಿನಂದಿಸುತ್ತಿದ್ದಾರೆ.
ಈ ಘಟನೆ ಮತ್ತೊಮ್ಮೆ ಗ್ರಾಮೀಣ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ಮೂಲಭೂತ ಆರೋಗ್ಯ ಮತ್ತು ತುರ್ತು ಸಾರಿಗೆ ಸೌಲಭ್ಯಗಳ ಅಗತ್ಯವನ್ನು ಎತ್ತಿ ತೋರಿಸಿದೆ. ಅದೇ ವೇಳೆ, ಒಬ್ಬ ಶಿಕ್ಷಕಿಯ ನಿಸ್ವಾರ್ಥ ಸೇವೆ ಎಷ್ಟೊಂದು ಅಮೂಲ್ಯ ಎಂಬುದಕ್ಕೂ ಇದು ಜೀವಂತ ಉದಾಹರಣೆಯಾಗಿದೆ.
Tags:#Teacher #AndhraPradesh #Parvathipuram #Gummalakshmipuram #Humanity #ViralVideo #Student #TribalSchool #Education #MedicalEmergency #GoodNews #InspiringStory #TeacherDedication #IndiaNews #KarunaaduTimes #Teachers #HumanityFirst #PositiveNews #ViralNews #SchoolNews