ಮಂಡ್ಯ, ಜು.3: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿರುವ ಭಾರೀ ಸರ್ಕಾರಿ ಭೂ ಹಗರಣವನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಖಾಸಗಿ ಹೆಸರಿಗೆ ವರ್ಗಾಯಿಸಲು ನಡೆದ ಸಂಚು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಖಾಸಗಿ ವ್ಯಕ್ತಿಯೊಬ್ಬ ಹಾಗೂ ಎಂಟು ಸರ್ಕಾರಿ ನೌಕರರು ಸೇರಿದ್ದಾರೆ. ಇದೇ ವೇಳೆ, ADLR ಅಧಿಕಾರಿ ಮೊಹಮ್ಮದ್ ಹುಸೇನ್ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿ, ADLR ಕಚೇರಿ, ಮಹದೇವಪುರ ಗ್ರಾಮ ಪಂಚಾಯಿತಿ PDO ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಶೋಧ ನಡೆಸಲಾಯಿತು.
ನಕಲಿ ಸರ್ವೇಯರ್ ಆಗಿ ಸರ್ಕಾರಿ ವ್ಯವಸ್ಥೆ ದುರ್ಬಳಕೆ
ಪ್ರಾಥಮಿಕ ತನಿಖೆಯ ಪ್ರಕಾರ, ಖಾಸಗಿ ಡೇಟಾ ಎಂಟ್ರಿ ಆಪರೇಟರ್ ನಿತಿನ್ ಪ್ರೇಮಾನಂದ ಮಹಾಲೆ, ಸರ್ಕಾರಿ ಸರ್ವೇಯರ್ನಂತೆ ಕಾರ್ಯನಿರ್ವಹಿಸಿ, ಕೆಲವು ಅಧಿಕಾರಿಗಳ ಅಧಿಕೃತ ಯೂಸರ್ ಐಡಿ, ಪಾಸ್ವರ್ಡ್ ಹಾಗೂ OTPಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಮೋಜಿನಿ (Mojini) ಭೂ ಸರ್ವೇ ಸಾಫ್ಟ್ವೇರ್ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.
ಅಧಿಕೃತ ಮುದ್ರೆಗಳು ವಶ, ನಗದು ಜಪ್ತಿ
ತನಿಖೆಯ ವೇಳೆ ಪರಾರಿಯಾಗಿರುವ ADLR ಅಧಿಕಾರಿ ಮೊಹಮ್ಮದ್ ಹುಸೇನ್ ಅವರ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಶ್ರೀರಂಗಪಟ್ಟಣ, ಸಕಲೇಶಪುರ, ಹುಣಸೂರು ಹಾಗೂ ಮುಲ್ಬಾಗಲ್ ಸರ್ವೆ ಕಚೇರಿಗಳಿಗೆ ಸೇರಿದ ಅಧಿಕೃತ ಮುದ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸುಮಾರು ₹1.40 ಲಕ್ಷ ನಗದು ಕೂಡ ಜಪ್ತಿ ಮಾಡಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ, ಖಾಸಗಿ ವ್ಯಕ್ತಿಯಾಗಿದ್ದರೂ ನಿತಿನ್ ಮಹಾಲೆಗೆ ಕೆಲ ಸರ್ವೇ ಅಧಿಕಾರಿಗಳು ಹಣ ಪಾವತಿಸಿ ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಂಶವೂ ಬೆಳಕಿಗೆ ಬಂದಿದೆ. ಪ್ರಕರಣದ ಹಿಂದೆ ಇನ್ನೂ ದೊಡ್ಡ ಜಾಲವಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.