ನವದೆಹಲಿ, ಜುಲೈ 3: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಜಾಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಈಗಾಗಲೇ ರದ್ದುಗೊಳಿಸಿತ್ತು. ಬಳಿಕ ನ್ಯಾಯಾಲಯವು ವಿಚಾರಣಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಬೇಕು ಎಂದು ಸೂಚಿಸಿ, ನಿರ್ದಿಷ್ಟ ಅವಧಿಯವರೆಗೆ ಹೊಸ ಜಾಮೀನು ಅರ್ಜಿ ಸಲ್ಲಿಸದಂತೆ ಆದೇಶ ನೀಡಿತ್ತು.
ಆ ಆದೇಶದಲ್ಲಿ ಸಡಿಲಿಕೆ ನೀಡುವಂತೆ ಹಾಗೂ ತುರ್ತು ಸಂದರ್ಭಗಳಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ದರ್ಶನ್ ಪರವಾಗಿ ಮನವಿ ಮಾಡಲಾಗಿತ್ತು. ಆದರೆ, ಈ ಅರ್ಜಿ ವಿಚಾರಣೆಗೆ ಸ್ವೀಕರಿಸುವಂತದ್ದಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿ ಅದನ್ನು ತಿರಸ್ಕರಿಸಿದೆ.
ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಒಟ್ಟು 273 ಸಾಕ್ಷಿಗಳ ಪೈಕಿ ಇದುವರೆಗೆ ಕೆಲವೇ ಸಾಕ್ಷಿಗಳ ವಿಚಾರಣೆ ನಡೆದಿದ್ದು, ನ್ಯಾಯಾಂಗ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆ ವಿಚಾರಣೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆಯಿದೆ ಎಂದು ದರ್ಶನ್ ಪರ ವಕೀಲರು ಈ ಹಿಂದೆ ವಾದ ಮಂಡಿಸಿದ್ದರು.
ಆದರೆ, ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸಂಬಂಧಿತ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದು, ಆ ಅವಧಿಯೊಳಗೆ ಜಾಮೀನು ನೀಡಲು ನಿರಾಕರಿಸಿದೆ. ಈ ಬೆಳವಣಿಗೆಯಿಂದ ದರ್ಶನ್ ಮುಂದಿನ ವರ್ಷದ ಮೇ ಮಧ್ಯಭಾಗದವರೆಗೆ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯ ಮೇಲೂ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ. ನ್ಯಾಯಾಲಯದ ಮುಂದಿನ ಕ್ರಮ ಹಾಗೂ ವಿಚಾರಣೆಯ ಪ್ರಗತಿಯೇ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.