ಕೋಲಾರ: ಚುನಾವಣಾ ಆಯೋಗದ ಮಹತ್ವಾಕಾಂಕ್ಷೆಯ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (Special Intensive Revision - SIR) ಕಾರ್ಯ ಕೋಲಾರ ನಗರದಲ್ಲಿ ವೇಗವಾಗಿ ನಡೆಯುತ್ತಿದ್ದು, ಅದರ ಅನುಷ್ಠಾನದ ವಿಧಾನ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಈ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸಿ, ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕಾಗಿದೆ. ಆದರೆ ಕೋಲಾರ ನಗರದ ಹಲವು ಬಡಾವಣೆಗಳಲ್ಲಿ ಈ ವಿಧಾನ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಮನೆ ಬಾಗಿಲಿಗೆ ತೆರಳುವ ಬದಲು ಅಧಿಕಾರಿಗಳು ಅಂಗನವಾಡಿ ಕೇಂದ್ರಗಳು, ಸಮುದಾಯ ಭವನಗಳು, ಸರ್ಕಾರಿ ಶಾಲೆಗಳು, ಅರಳಿ ಕಟ್ಟೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಿ, ಅಲ್ಲಿಗೆ ನಾಗರಿಕರನ್ನೇ ಕರೆಸಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಕಳೆದ ಎರಡು ದಿನಗಳಿಂದ ಕೋಲಾರ ನಗರದ ವಿವಿಧ ವಾರ್ಡ್ಗಳಲ್ಲಿ ಇದೇ ರೀತಿಯ ವ್ಯವಸ್ಥೆ ಜಾರಿಯಲ್ಲಿದೆ. ವಿಶೇಷವಾಗಿ ಕುರುಬರಪೇಟೆ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರದ ಬಳಿ ಟೇಬಲ್ಗಳನ್ನು ಹಾಕಿಕೊಂಡಿರುವ ಬಿಎಲ್ಒಗಳು ಸ್ಥಳೀಯ ನಿವಾಸಿಗಳಿಗೆ ಅಲ್ಲಿಗೇ ಬರುವಂತೆ ಸೂಚಿಸಿ, ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.
ಈ ವಿಧಾನದಿಂದ ವೃದ್ಧರು, ಅಂಗವಿಕಲರು ಹಾಗೂ ಕೆಲಸಕ್ಕೆ ತೆರಳುವ ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮನೆ-ಮನೆ ಸಮೀಕ್ಷೆ ನಡೆಸಬೇಕೇ ಅಥವಾ ಶಿಬಿರಗಳ ಮೂಲಕ ಅರ್ಜಿ ಸ್ವೀಕರಿಸುವುದಕ್ಕೂ ಅವಕಾಶವಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.
ಈ ಬಗ್ಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ನಡೆಯುವಂತಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
Tags#Kolar #KolarNews #VoterList #SIR #ElectionCommission #KarnatakaNews #BLO #SpecialIntensiveRevision #ElectionNews #Kurubarapete #Anganwadi #CommunityHall #Voting #KannadaNews #KarunaaduTimes #KarunaaduTimesDigital #wwwKarunaaduTimesCom #BreakingNews #KarnatakaPolitics #LocalNews