ಹೈದರಾಬಾದ್, ಜು.3:: ತೆಲಂಗಾಣದಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯೊಂದು ಪೊಲೀಸ್ ಇಲಾಖೆಯಲ್ಲೇ ಭಾರೀ ಸಂಚಲನ ಮೂಡಿಸಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಸಂಕೀರೆಡ್ಡಿ ಭೀಮ್ ರೆಡ್ಡಿ ಅವರ ಹೆಸರಿನಲ್ಲಿ ಹಾಗೂ ಸಂಬಂಧಿಕರು ಮತ್ತು ಬೇನಾಮಿಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಜುಲೈ 2ರಂದು ಹೈದರಾಬಾದ್ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಸ್ಪಿ ಸಂಕೀರೆಡ್ಡಿ ಭೀಮ್ ರೆಡ್ಡಿ ಅವರ ನಿವಾಸ, ಕಚೇರಿ ಹಾಗೂ ಆಪ್ತರು ಮತ್ತು ಬೇನಾಮಿಗಳಿಗೆ ಸಂಬಂಧಿಸಿದ ಒಟ್ಟು 16 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಸರ್ಕಾರಿ ಸೇವೆಯ ಅವಧಿಯಲ್ಲಿ ಕಾನೂನುಬಾಹಿರ ಮಾರ್ಗಗಳಿಂದ ಅಧಿಕೃತ ಆದಾಯಕ್ಕೆ ಮೀರಿದ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದಾಖಲೆಗಳು, ಬ್ಯಾಂಕ್ ಮಾಹಿತಿ ಹಾಗೂ ಸ್ಥಿರಾಸ್ತಿಗಳ ವಿವರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶೋಧದ ವೇಳೆ ಹೈದರಾಬಾದ್ನ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಮತ್ತು ತೆಲ್ಲಾಪುರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಐಷಾರಾಮಿ ವಿಲ್ಲಾಗಳು, ಬಹುಮಹಡಿ ಅಪಾರ್ಟ್ಮೆಂಟ್ಗಳಲ್ಲಿನ ಹಲವು ಫ್ಲಾಟ್ಗಳು, ಜಿ+2 ಪೆಂಟ್ಹೌಸ್, ಸುಮಾರು 3,000 ಚದರ ಅಡಿ ವಾಣಿಜ್ಯ ಮಳಿಗೆ ಸೇರಿದಂತೆ ಹಲವು ಸ್ಥಿರಾಸ್ತಿಗಳು ಪತ್ತೆಯಾಗಿವೆ.
ಇದರ ಜೊತೆಗೆ ಹೈದರಾಬಾದ್ ಸುತ್ತಮುತ್ತಲಿನ ಓಪನ್ ಪ್ಲಾಟ್ಗಳು, ಕರ್ನಾಟಕದಲ್ಲಿ ಸುಮಾರು 44 ಎಕರೆ ಕೃಷಿ ಭೂಮಿ ಹಾಗೂ ಬೆಂಗಳೂರು ದೇವನಹಳ್ಳಿ ಭಾಗದಲ್ಲಿ 1 ಎಕರೆ ಜಮೀನು ಸೇರಿದಂತೆ ಒಟ್ಟು 50 ಎಕರೆಗೂ ಅಧಿಕ ಭೂಮಿಯ ದಾಖಲೆಗಳು ಸಿಕ್ಕಿವೆ. ಅಲ್ಲದೆ ಕೆಜಿಗಟ್ಟಲೆ ಚಿನ್ನ ಸೇರಿದಂತೆ ಅಪಾರ ಪ್ರಮಾಣದ ಮೌಲ್ಯಯುತ ಆಸ್ತಿಯೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸಿಬಿಯ ಪ್ರಾಥಮಿಕ ಅಂದಾಜಿನ ಪ್ರಕಾರ, ಪತ್ತೆಯಾದ ಒಟ್ಟು ಆಸ್ತಿಯ ಮಾರುಕಟ್ಟೆ ಮೌಲ್ಯ ₹200 ಕೋಟಿಗೂ ಅಧಿಕವಾಗಿದೆ. ಶೋಧ ಕಾರ್ಯ ಪೂರ್ಣಗೊಂಡ ನಂತರ ಡಿಎಸ್ಪಿ ಸಂಕೀರೆಡ್ಡಿ ಭೀಮ್ ರೆಡ್ಡಿ ಅವರನ್ನು ಅಧಿಕಾರಿಗಳು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇನ್ನಷ್ಟು ಆಸ್ತಿ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಪರಿಶೀಲನೆ ನಡೆಯುತ್ತಿದೆ.
Tags:#Telangana #Hyderabad #ACB #DSP #SankireddyBhimReddy #Corruption #DisproportionateAssets #Police #CrimeNews #Karnataka #Bengaluru #Devanahalli #Gold #Land #BreakingNews #KarunaaduTimes #wwwKarunaaduTimesCom