ರಾಮನಗರ: ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ₹1 ಲಕ್ಷ ದಂಡ ಹಾಗೂ ಸಂತ್ರಸ್ತ ಬಾಲಕಿಗೆ ₹4 ಲಕ್ಷ ಪರಿಹಾರ ನೀಡುವಂತೆ ರಾಮನಗರದ ವಿಶೇಷ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
2021ರ ಏಪ್ರಿಲ್ 16ರಂದು ರಾಮನಗರ ನಗರದ ಮೆಹಬೂಬ್ ನಗರ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಲಂಗಳು ಹಾಗೂ ಪೋಕ್ಸೋ ಕಾಯ್ದೆಯಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ರಾಮನಗರದ ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ನಡೆಸಲಾಯಿತು. ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಧೀಶೆ ಶ್ರೀಮತಿ ಎಂ. ಪಂಚಾಕ್ಷರಿ ಅವರು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದರು. ಜೊತೆಗೆ, ಸಂತ್ರಸ್ತ ಬಾಲಕಿಗೆ ₹4 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ವೀಣಾ ಕುಮಾರಿ ಎನ್. ಅವರು ಸಮರ್ಥವಾಗಿ ವಾದ ಮಂಡಿಸಿದರು. ತನಿಖಾಧಿಕಾರಿಗಳಾದ ಸುಮಾರಾಣಿ ಹಾಗೂ ವೆಂಕಟೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಸಾಕ್ಷಿದಾರರನ್ನು ಸಮರ್ಪಕವಾಗಿ ಹಾಜರುಪಡಿಸಿ, ಪ್ರಕರಣವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ತೀರ್ಪು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದ್ದು, ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ಅನಿವಾರ್ಯ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದೆ.
Tags:#Ramanagara #RamanagaraNews #POCSO #POCSOCase #CrimeNews #KarnatakaNews #ChildSafety #CourtVerdict #WomenPolice #KarunaaduTimes #BreakingNews #KannadaNews #RapeCase #Justice #SexualAssault #RamanagaraCourt #wwwkarunaadutimescom