ಮಂಡ್ಯ: ಮಂಡ್ಯ ಜಿಲ್ಲೆಯ ಬಳಿ ಬೆಂಗಳೂರು–ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಗುಂಡಿನ ದಾಳಿ ಪ್ರಕರಣ ಸಂಚಲನ ಮೂಡಿಸಿದೆ. ಮೆಡಿಸಿನ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ಅಡ್ಡಗಟ್ಟಲು ಯತ್ನಿಸಿದ ಗುಂಪು, ಚಾಲಕ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಗುಂಡು ಹಾರಿಸಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಮಂಡ್ಯದ ಪ್ರಭಾವಿ ವ್ಯಕ್ತಿಯ ಪುತ್ರನ ಹೆಸರು ಕೇಳಿಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಔಷಧ ಸಾಮಗ್ರಿಗಳನ್ನು ಹೊತ್ತ ಕಂಟೇನರ್ ಲಾರಿ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಮಂಡ್ಯದತ್ತ ಸಂಚರಿಸುತ್ತಿತ್ತು. ಆ ವೇಳೆ ಐಷಾರಾಮಿ ಕಾರಿನಲ್ಲಿ ಬಂದಿದ್ದ ಕೆಲವರು ಲಾರಿಯನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಚಾಲಕ ವಾಹನ ನಿಲ್ಲಿಸದೆ ಮುಂದುವರಿದಾಗ, ಲಾರಿ ಕಡೆಗೆ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ವೇಳೆ ಲಾರಿಯಲ್ಲಿ ಚಾಲಕ ಶಂಕರ್ ಒಬ್ಬರೇ ಇದ್ದರು. ಜೀವಭಯದಿಂದ ಅವರು ತಕ್ಷಣವೇ ಸ್ಥಳದಿಂದ ತೆರಳಿದ್ದು, ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಬಳಿಕ ಘಟನೆ ಬಗ್ಗೆ ಮಾಹಿತಿ ಹರಡುತ್ತಿದ್ದಂತೆ ಪೊಲೀಸರು ಚಾಲಕನನ್ನು ಸಂಪರ್ಕಿಸಿ ಹೇಳಿಕೆ ದಾಖಲಿಸಿಕೊಂಡು ಅಧಿಕೃತ ದೂರು ದಾಖಲಿಸಿದ್ದಾರೆ.
ಪ್ರಕರಣದ ಸಂಬಂಧ ಆರೋಪ ಎದುರಿಸುತ್ತಿರುವ ಪ್ರಭಾವಿ ವ್ಯಕ್ತಿಯ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಮಂಡ್ಯ ಡಿವೈಎಸ್ಪಿ ಕಚೇರಿಯಲ್ಲಿ ಹಲವು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ. ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಇದೇ ವೇಳೆ, ಆರೋಪಿಯ ಬಳಿಯಿದ್ದ ಗನ್ಗೆ ಮಾನ್ಯ ಪರವಾನಗಿ ಇರಲಿಲ್ಲ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಹೀಗಿದ್ದರೂ ಆತನಿಗೆ ಶಸ್ತ್ರಾಸ್ತ್ರ ಹೇಗೆ ಲಭ್ಯವಾಯಿತು? ಅದನ್ನು ಎಲ್ಲಿಂದ ಪಡೆದ? ಎಂಬ ಪ್ರಶ್ನೆಗಳಿಗೂ ಉತ್ತರ ಹುಡುಕುವ ಕೆಲಸದಲ್ಲಿ ಪೊಲೀಸರು ತೊಡಗಿದ್ದಾರೆ.
ಪ್ರಕರಣದ ನಿಖರ ಕಾರಣ, ಗುಂಡು ಹಾರಿಸಿದ ಉದ್ದೇಶ ಹಾಗೂ ದರೋಡೆ ಯತ್ನವೇ ಅಥವಾ ಬೇರೆ ಹಿನ್ನೆಲೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Tags#Mandya #MandyaNews #BreakingNews #KarnatakaNews #ContainerLorry #MedicineTruck #FiringCase #CrimeNews #HighwayCrime #GunAttack #PoliceInvestigation #MandyaPolice #KarunaaduTimes #KannadaNews #LatestNews #ViralNews