ಬೆಂಗಳೂರು:ರಾಜ್ಯದಲ್ಲಿ ಮಳೆಯ ಕೊರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬರದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಇಳಿದಿರುವುದರಿಂದ, ಅಣೆಕಟ್ಟು ನೀರನ್ನು ಅವಲಂಬಿಸಿ ರೈತರು ಬೆಳೆ ಬಿತ್ತನೆ ಮಾಡಬಾರದು ಎಂದು ಮನವಿ ಮಾಡಿದರು.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ವಾಣಿವಿಲಾಸ ಅಣೆಕಟ್ಟುಗಳ ಒಳಹರಿವು ಬಹುತೇಕ ಶೂನ್ಯಕ್ಕೆ ತಲುಪಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಮಳೆಯ ಕೊರತೆ ಮುಂದುವರಿದಿದೆ.
ಹೇಮಾವತಿ, ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿನ ನೀರಿನ ಮಟ್ಟವೂ ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
ಮಳೆ ಪರಿಸ್ಥಿತಿಯನ್ನು ಗಮನಿಸಿ ಬೆಳೆ ಆಯ್ಕೆ ಮಾಡಬೇಕು. ಅಣೆಕಟ್ಟಿನಿಂದ ತಕ್ಷಣ ನೀರು ಬಿಡುಗಡೆ ಮಾಡುವಂತೆ ಒತ್ತಡ ಹೇರದೆ, ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಸಹಕರಿಸುವಂತೆ ರೈತರಿಗೆ ಮನವಿ ಮಾಡಿದರು.
ಬರ ನಿರ್ವಹಣೆಗೆ ಈಗಾಗಲೇ ಸಚಿವರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದ್ದು, ಮೇವು, ಕುಡಿಯುವ ನೀರು ಹಾಗೂ ಅಗತ್ಯವಿರುವ ಕಡೆ ತುರ್ತು ಕೊಳವೆಬಾವಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾವೂ ರಾಜ್ಯದ ನಾಲ್ಕು ವಿಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸುವುದಾಗಿ ಸಿಎಂ ತಿಳಿಸಿದರು.
ಕೇಂದ್ರ ಸರ್ಕಾರವೂ ನೀರು ಮತ್ತು ವಿದ್ಯುತ್ ಬಳಕೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿರುವುದಾಗಿ ಹೇಳಿದ ಅವರು, ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.
Tags#Karnataka #DKSivakumar #Drought #KarnatakaDrought #RainAlert #Farmers #KRSDam #Kabini #Hemavathi #WaterCrisis #Mandya #Agriculture #KarnatakaNews #BreakingNews #KarunaaduTimes #KannadaNews #Bengaluru #WaterLevel #Monsoon #FarmNews