ಕಾರವಾರ: ತುಮಕೂರಿನಲ್ಲಿ ನಾಡಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ ನಾಗೇಂದ್ರ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಜಾಡು ಹಿಡಿದಿರುವ ಅಂಕೋಲ ಪೊಲೀಸರು, ನಾಗೇಂದ್ರನಿಗೆ ನಾಡಬಾಂಬ್ ತಯಾರಿಸಿ ನೀಡಿದ ಶಂಕೆಯ ಮೇರೆಗೆ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಮಂದಿ ಸ್ನೇಹಿತರು, ಪರಿಚಿತರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದು, ದೊರೆತ ಮಾಹಿತಿಯ ಆಧಾರದಲ್ಲಿ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಒಬ್ಬ ಹಾಗೂ ಸರಳೆಬೈಲು ಭಾಗದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ನಾಗೇಂದ್ರ ಈ ವ್ಯಕ್ತಿಗಳಿಂದ ನಾಡಬಾಂಬ್ ಪಡೆದುಕೊಂಡಿರುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಮೊಬೈಲ್ ಬಳಸದೇ ನಡೆಸಿದ್ದ ರಹಸ್ಯ ಸಂಪರ್ಕ
ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ನಾಡಬಾಂಬ್ ಖರೀದಿಸುವ ವೇಳೆ ಯಾವುದೇ ಮೊಬೈಲ್ ಕರೆ ಅಥವಾ ಡಿಜಿಟಲ್ ಸಂಪರ್ಕ ಬಳಸಿರಲಿಲ್ಲ. ಅನುಮಾನ ಮೂಡದಂತೆ ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿ ವ್ಯವಹಾರ ನಡೆಸಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಹಂತ ತಲುಪಿದೆ.
ಜಂಟಿ ಕಾರ್ಯಾಚರಣೆ
ಈ ಪ್ರಕರಣದ ತನಿಖೆಯನ್ನು ಅಂಕೋಲ ಹಾಗೂ ತುಮಕೂರು ಪೊಲೀಸರು ಜಂಟಿಯಾಗಿ ನಡೆಸುತ್ತಿದ್ದು, ವಶಕ್ಕೆ ಪಡೆದವರಿಂದ ಮಹತ್ವದ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ನಾಡಬಾಂಬ್ ತಯಾರಿಕೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ವಿಸ್ತರಿಸಲಾಗಿದೆ.
ಪೊಲೀಸರು ಸದ್ಯ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ಕುರಿತು ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.