ನವದೆಹಲಿ: ದೇಶದಲ್ಲಿ ಇಂಧನ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಖಾಸಗಿ ತೈಲ ಸಂಸ್ಥೆ ನಯಾರಾ ಎನರ್ಜಿ (Nayara Energy) ಮಹತ್ವದ ಸಿಹಿಸುದ್ದಿ ನೀಡಿದೆ. ಕಂಪನಿಯು ಬುಧವಾರದಿಂದ ದೇಶಾದ್ಯಂತ ತನ್ನ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ಗೆ ₹3 ಇಳಿಕೆ ಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಗ್ಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖವಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ದೇಶಾದ್ಯಂತ ಇರುವ 7,000ಕ್ಕೂ ಹೆಚ್ಚು ನಯಾರಾ ಎನರ್ಜಿ ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.
ಆದರೆ, ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್ ಹಾಗೂ ಇತರ ಸ್ಥಳೀಯ ತೆರಿಗೆಗಳ ಕಾರಣದಿಂದ ಅಂತಿಮ ಚಿಲ್ಲರೆ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಸಾಧ್ಯತೆ ಇದೆ.
ಜಾಗತಿಕ ಬೆಳವಣಿಗೆಗಳ ಪರಿಣಾಮ
ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ್ದ ಸಂಘರ್ಷದ ವಾತಾವರಣ ಶಮನಗೊಂಡಿದ್ದು, ಪ್ರಮುಖ ಸಮುದ್ರ ಮಾರ್ಗಗಳು ಮತ್ತೆ ತೆರೆದಿವೆ. ಇದರ ಪರಿಣಾಮವಾಗಿ ಕಚ್ಚಾ ತೈಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆ ಸುಧಾರಿಸಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಇದೇ ಬೆಳವಣಿಗೆಯ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ನಯಾರಾ ಎನರ್ಜಿ ದರ ಕಡಿತ ಘೋಷಿಸಿದೆ.
ಸರ್ಕಾರಿ ತೈಲ ಕಂಪನಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ನಯಾರಾ ಎನರ್ಜಿ ದರ ಇಳಿಕೆ ಮಾಡಿದರೂ, ದೇಶದ ಬಹುಪಾಲು ಇಂಧನ ಮಾರುಕಟ್ಟೆಯನ್ನು ಹೊಂದಿರುವ ಇಂಡಿಯನ್ ಆಯಿಲ್ (IOC), ಭಾರತ್ ಪೆಟ್ರೋಲಿಯಂ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ತಮ್ಮ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪ್ರಸ್ತುತ ದೆಹಲಿಯಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ಗಳಲ್ಲಿ:
ಪೆಟ್ರೋಲ್: ಲೀಟರ್ಗೆ ₹102.12
ಡೀಸೆಲ್: ಲೀಟರ್ಗೆ ₹95.20
ದರದಲ್ಲೇ ಮಾರಾಟ ಮುಂದುವರಿದಿದೆ.
ಹಿಂದೆ ಏರಿಕೆ, ಈಗ ಇಳಿಕೆ
ಇರಾನ್ ಸಂಘರ್ಷದ ಪರಿಣಾಮ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ವೇಳೆ, ಮಾರ್ಚ್ 26ರಂದು ನಯಾರಾ ಎನರ್ಜಿ ಪೆಟ್ರೋಲ್ಗೆ ₹5 ಹಾಗೂ ಡೀಸೆಲ್ಗೆ ₹3 ಹೆಚ್ಚಳ ಮಾಡಿತ್ತು. ಬಳಿಕ ಸರ್ಕಾರಿ ತೈಲ ಕಂಪನಿಗಳೂ ಹಂತ ಹಂತವಾಗಿ ಇಂಧನ ದರವನ್ನು ಹೆಚ್ಚಿಸಿದ್ದವು. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನಯಾರಾ ಮತ್ತೆ ಗ್ರಾಹಕರಿಗೆ ದರ ಕಡಿತದ ಲಾಭ ನೀಡಿದೆ.
ದರ ಇಳಿಕೆಯಿಂದ ಯಾರಿಗೆ ಲಾಭ?
ನಯಾರಾ ಎನರ್ಜಿ ಬಂಕ್ಗಳಿಂದ ಇಂಧನ ಖರೀದಿಸುವ ವಾಹನ ಸವಾರರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೆ ಈ ದರ ಇಳಿಕೆ ನೇರವಾಗಿ ಪ್ರಯೋಜನವಾಗಲಿದೆ. ಆದರೆ ದೇಶದ ಹೆಚ್ಚಿನ ಗ್ರಾಹಕರು ಸರ್ಕಾರಿ ತೈಲ ಕಂಪನಿಗಳ ಬಂಕ್ಗಳನ್ನು ಅವಲಂಬಿಸಿರುವುದರಿಂದ, ಅವುಗಳು ದರ ಇಳಿಕೆ ಘೋಷಿಸುವವರೆಗೂ ಬಹುತೇಕ ಜನರಿಗೆ ಈ ಲಾಭ lದೊರೆಯುವುದಿಲ್ಲ.