ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಇಂದಿನಿಂದ ಮತ್ತೊಂದು ವೆಚ್ಚದ ಹೊರೆ ಎದುರಾಗಿದೆ. ನೈಸ್ ರಸ್ತೆ (NICE Road) ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಟೋಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ನಿರ್ವಹಣಾ ವೆಚ್ಚ, ಕಾರ್ಯಾಚರಣೆಯ ಖರ್ಚು ಹಾಗೂ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಈ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಹೊಸ ದರ ಪರಿಷ್ಕರಣೆಯಿಂದ ಪ್ರತಿದಿನ ನೈಸ್ ರಸ್ತೆ ಬಳಸುವ ಸಾವಿರಾರು ಕಾರು, ಬೈಕ್, ಬಸ್ ಹಾಗೂ ಸರಕು ವಾಹನಗಳ ಮಾಲೀಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ವಿಶೇಷವಾಗಿ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಇದು ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಪ್ರಮುಖ ಮಾರ್ಗಗಳಲ್ಲಿ ಎಷ್ಟು ಹೆಚ್ಚಳ?
ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ನಡುವೆ ಸಂಚರಿಸುವ ಕಾರುಗಳ ಟೋಲ್ ಶುಲ್ಕ ₹65ರಿಂದ ₹72ಕ್ಕೆ ಏರಿಕೆಯಾಗಿದೆ. ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಟೋಲ್ ₹30ರಿಂದ ₹33ಕ್ಕೆ ಹೆಚ್ಚಿಸಲಾಗಿದೆ.
ಮೈಸೂರು ರಸ್ತೆ–ಮಾಗಡಿ ರಸ್ತೆ ನಡುವೆ ಕಾರುಗಳ ಟೋಲ್ ₹70ರಿಂದ ₹77ಕ್ಕೆ ಏರಿಕೆಯಾಗಿದ್ದು, ವಿವಿಧ ವಿಭಾಗಗಳಲ್ಲಿ ವಾಹನಗಳಿಗೆ ₹3ರಿಂದ ₹8ರವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.
ಬಸ್ ಮತ್ತು ಟ್ರಕ್ಗಳಿಗೂ ಹೆಚ್ಚಿದ ಟೋಲ್
ಬಸ್ಗಳ ಟೋಲ್ ಶುಲ್ಕದಲ್ಲೂ ಗಣನೀಯ ಏರಿಕೆ ಮಾಡಲಾಗಿದೆ. ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ವಿಭಾಗದಲ್ಲಿ ಬಸ್ಗಳಿಗೆ ₹195ರಿಂದ ₹215, ಟ್ರಕ್ಗಳಿಗೆ ₹128ರಿಂದ ₹141 ಟೋಲ್ ನಿಗದಿಪಡಿಸಲಾಗಿದೆ.
ತಜ್ಞರ ಪ್ರಕಾರ, ಈ ಹೆಚ್ಚುವರಿ ವೆಚ್ಚದ ಪರಿಣಾಮವಾಗಿ ಖಾಸಗಿ ಸಾರಿಗೆ ಸಂಸ್ಥೆಗಳ ಜೊತೆಗೆ ಬಿಎಂಟಿಸಿ ಕಾರ್ಯಾಚರಣೆಯ ಮೇಲೂ ಆರ್ಥಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ನಲ್ಲೂ ದರ ಪರಿಷ್ಕರಣೆ
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ನಲ್ಲಿ ಏಕಮುಖ (Single Trip) ಪ್ರಯಾಣದ ಟೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಬಹು ಪ್ರಯಾಣ (Multiple Trips) ಪಾಸ್ ಬಳಸುವ ವಾಹನ ಸವಾರರಿಗೆ ಹೆಚ್ಚುವರಿ ₹5 ಶುಲ್ಕ ವಿಧಿಸಲಾಗಿದೆ.
ಹೊಸ ದರಗಳು
ವಾಹನ
ಏಕಮುಖ
ಬಹು ಪ್ರಯಾಣ
ದ್ವಿಚಕ್ರ ವಾಹನ
₹25
₹40
ಕಾರು/ಜೀಪ್/ವ್ಯಾನ್
₹65
₹100
ಲಘು ವಾಣಿಜ್ಯ ವಾಹನ
₹90
₹130
ವಾಹನ ಸವಾರರ ಮೇಲೆ ಹೆಚ್ಚುವರಿ ಹೊರೆ
ಇತ್ತೀಚಿನ ದಿನಗಳಲ್ಲಿ ಇಂಧನ, ವಾಹನ ನಿರ್ವಹಣೆ ಮತ್ತು ಇತರೆ ವೆಚ್ಚಗಳು ಏರಿಕೆಯಾಗಿರುವ ಬೆನ್ನಲ್ಲೇ ಟೋಲ್ ದರ ಹೆಚ್ಚಳವೂ ವಾಹನ ಸವಾರರ ಜೇಬಿಗೆ ಮತ್ತಷ್ಟು ಬರೆ ಎಳೆಯುವ ಸಾಧ್ಯತೆ ಇದೆ. ಪ್ರತಿದಿನ ನೈಸ್ ರಸ್ತೆ ಬಳಸುವ ಪ್ರಯಾಣಿಕರು ತಮ್ಮ ಮಾಸಿಕ ಸಂಚಾರ ವೆಚ್ಚವನ್ನು ಮರು ಲೆಕ್ಕ ಹಾಕಬೇಕಾದ ಪರಿಸ್ಥಿತಿ ಎದುರಾಗಬಹುದು