ಎರಡೂ ಕಡೆಯಿಂದ ಎಫ್ಐಆರ್ – 24 ಹಿಂದೂ, 26 ಮುಸ್ಲಿಂ ಯುವಕರ ವಿರುದ್ಧ ಪ್ರಕರಣ; ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವಿಚಾರವಾಗಿ ಆರಂಭವಾದ ವಾಗ್ವಾದ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಎರಡೂ ಸಮುದಾಯಗಳ ಯುವಕರ ವಿರುದ್ಧ ಪರಸ್ಪರ ದೂರುಗಳು ದಾಖಲಾಗಿವೆ. ಘಟನೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ಮಾಹಿತಿಯ ಪ್ರಕಾರ, ಕಾರಹುಣ್ಣಿಮೆಯ ಅಂಗವಾಗಿ ಗ್ರಾಮದಲ್ಲಿ ಹೋರಿ ಓಡಿಸುವ ಸಂಪ್ರದಾಯ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಪರಿಸ್ಥಿತಿ ನಿಯಂತ್ರಣ ತಪ್ಪಿ, ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.
ಒಂದು ಕಡೆಯ ದೂರಿನ ಪ್ರಕಾರ, ಮಸೀದಿ ಸಮೀಪ ಪಟಾಕಿ ಸಿಡಿಸಬಾರದೆಂದು ಹೇಳಿದ ವಿಚಾರಕ್ಕೆ ಕೆಲ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಶಿವರಾಜ್, ಲೋಹಿತ್ ಹಾಗೂ ಜಯಪ್ಪ ಗಂಭೀರವಾಗಿ ಗಾಯಗೊಂಡಿದ್ದು, ನಿಂಗಪ್ಪ, ನಾಗಪ್ಪ ಮತ್ತು ಮಲ್ಲಪ್ಪ ಸೇರಿದಂತೆ ಹಲವರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಸಂಬಂಧ ಹರೀಶ್ ಕುರುಬರ ನೀಡಿದ ದೂರಿನ ಮೇರೆಗೆ 26 ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಗುಲಾಬ್ಜಾನ್ ಅನ್ವರ್ಸಾಬ್ ಯತ್ನಳ್ಳಿ ನೀಡಿದ ದೂರಿನ ಆಧಾರದ ಮೇಲೆ ಪ್ರವೀಣ್ ಭಟ್ಟಿ, ವಿರಾಜ್ ಕುರುಬರ ಸೇರಿದಂತೆ 24 ಹಿಂದೂ ಯುವಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ದೂರಿನಲ್ಲಿ, ಹೋರಿ ಓಡಿಸುವ ವೇಳೆ ಪಟಾಕಿ ಮಸೀದಿಯ ಕಾಂಪೌಂಡ್ ಒಳಗೆ ಬಿದ್ದಿದ್ದು, ಅದನ್ನು ಪ್ರಶ್ನಿಸಿದಾಗ ಗುಂಪು ಸೇರಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಗ್ರಾಮಕ್ಕೆ ವಿಜಯೇಂದ್ರ ಭೇಟಿ – ಸರ್ಕಾರದ ವಿರುದ್ಧ ವಾಗ್ದಾಳಿ
ಘಟನೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ವೇಳೆ ಆರೋಪಿಗಳ ಬಂಧನ ವಿಳಂಬವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅದೇ ವೇಳೆ ಸ್ಥಳೀಯ ಶಾಸಕ ಶ್ರೀನಿವಾಸ ಮಾನೆ ಅವರ ಕಾರ್ಯವೈಖರಿಯನ್ನೂ ಟೀಕಿಸಿದ ವಿಜಯೇಂದ್ರ, ಜನರ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಆಗ್ರಹಿಸಿದರು.
ತನಿಖೆ ಮುಂದುವರಿಕೆ
ಪ್ರಸ್ತುತ ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಸ್ಥಳೀಯರ ಹೇಳಿಕೆಗಳು ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Tags#Hanagal #Hirekerur #Naregal #Haveri #Karahunnime #Hindu #Muslim #CommunalClash #PoliceCase #FIR #BYVijayendra #KarnatakaNews #BreakingNews #CrimeNews #LawAndOrder #HanagalNews #HaveriNews #KarunaduTimes #wwwKarunaaduTimesCom
Website: www.karunaadutimes.com�