ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ: ಸರಾಸರಿ ವಿದ್ಯುತ್ ಬಿಲ್ ನೀಡಲಿದೆ ಬೆಸ್ಕಾಂ – ಗೃಹ ಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಮಾಹಿತಿ
ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಅಭಿಯಾನವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳಲ್ಲಿ ಸಾಮಾನ್ಯ ಮೀಟರ್ ರೀಡಿಂಗ್ ಪ್ರಕ್ರಿಯೆ ನಡೆಸಲಾಗುವುದಿಲ್ಲ ಎಂದು ಬೆಸ್ಕಾಂ (BESCOM) ಸ್ಪಷ್ಟಪಡಿಸಿದೆ. ಈ ಅವಧಿಯಲ್ಲಿ ಗೃಹ ಬಳಕೆದಾರರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ಬಿಲ್ ಸಿದ್ಧಪಡಿಸಿ, ಎಸ್ಎಂಎಸ್ ಮೂಲಕ ಕಳುಹಿಸಲಾಗುತ್ತದೆ.
ಬೆಸ್ಕಾಂನ ಮೀಟರ್ ರೀಡರ್ಗಳನ್ನು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ಕಾರ್ಯಕ್ಕೆ ನಿಯೋಜಿಸಿರುವುದರಿಂದ, ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಯಾರಿಗೆ ಸರಾಸರಿ ಬಿಲ್ ಅನ್ವಯವಾಗುವುದಿಲ್ಲ?
ಆದರೆ, ಕೆಲವು ವರ್ಗದ ಗ್ರಾಹಕರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರಿತ ಬಿಲ್ವೇ ನೀಡಲಾಗುತ್ತದೆ. ಅವುಗಳೆಂದರೆ:
ಎಚ್ಟಿ (HT) ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು
40 HP ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್ಟಿ (LT) ಗ್ರಾಹಕರು
ಸೋಲಾರ್ ರೂಫ್ಟಾಪ್ (SRTPV) ಸಂಪರ್ಕ ಹೊಂದಿರುವವರು
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರು
ಆಗಸ್ಟ್ನಲ್ಲಿ ಬಿಲ್ ಹೊಂದಾಣಿಕೆ
ಜುಲೈ ತಿಂಗಳಲ್ಲಿ ನೀಡಲಾಗುವ ಸರಾಸರಿ ಬಿಲ್ನಲ್ಲಿ ಹೆಚ್ಚುವರಿ ಅಥವಾ ಕಡಿಮೆ ಮೊತ್ತ ದಾಖಲಾಗಿದ್ದರೆ, ಆಗಸ್ಟ್ ತಿಂಗಳಿನಿಂದ ನೈಜ ಮೀಟರ್ ರೀಡಿಂಗ್ ಪ್ರಾರಂಭವಾದ ಬಳಿಕ ಮುಂದಿನ ಬಿಲ್ನಲ್ಲಿ ಅದನ್ನು ಸೂಕ್ತವಾಗಿ ಹೊಂದಾಣಿಕೆ ಮಾಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.
ಪರಿಶೀಲನೆ ವೇಳೆ ಈ ದಾಖಲೆಗಳನ್ನು ಸಿದ್ಧವಾಗಿಡಿ
ಗೃಹ ಜ್ಯೋತಿ ಯೋಜನೆಯ ಪರಿಶೀಲನೆಗಾಗಿ ಮನೆಗಳಿಗೆ ಭೇಟಿ ನೀಡುವ ಬೆಸ್ಕಾಂ ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಪರಿಶೀಲನೆ ವೇಳೆ ಈ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬೇಕಾಗಬಹುದು:
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ಪಾನ್ ಕಾರ್ಡ್
ಪಡಿತರ ಚೀಟಿ
ಜಾತಿ ಪ್ರಮಾಣ ಪತ್ರ
ಬೆಸ್ಕಾಂ ಸಿಬ್ಬಂದಿಯ ಗುರುತನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಮಾತ್ರ ನೀಡುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.